Tuesday, August 16, 2022

Latest Posts

ಬಕ್ರೀದ್ ಆಚರಣೆ ಸಂದರ್ಭ ಮಾರ್ಗಸೂಚಿ ಪಾಲಿಸಿ: ವಕ್ಫ್ ಸಮಿತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕೊಡಗು:

ಮುಂದಿನ ವಾರ ಆಚರಿಸಲ್ಪಡುವ ಬಕ್ರೀದ್ ಹಬ್ಬದ ಸಂದರ್ಭ ಮುಸಲ್ಮಾನ ಬಾಂಧವರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಜಿಲ್ಲಾ ವಕ್ಫ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್ ಮನವಿ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು,ಸರ್ಕಾರದ ನಿಯಮದಂತೆ ಈದ್ಗಾಗಳಲ್ಲಿ ಬಕ್ರೀದ್ ದಿನ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನಿರ್ಬಂಧಿಸಿದ್ದು, ಮಸೀದಿಗಳಲ್ಲಷ್ಟೇ ಭಕ್ತರು ಪ್ರಾರ್ಥನೆ ಸಲ್ಲಿಸಬಹುದೆಂದು ತಿಳಿಸಿದ್ದಾರೆ.
ರಾಜ್ಯದೆಲ್ಲೆಡೆ ಕೋವಿಡ್ ಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದರೂ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹೆಚ್ಚಿನ ಜಾಗರೂಕತೆಯನ್ನು ಅನುಸರಿಸುವ ಅನಿವಾರ್ಯತೆಯಿದೆ. ಮುಂಬರುವ ದಿನಗಳಲ್ಲಿ ಸಂಭಾವ್ಯ 3ನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶದಂತೆ ಯಾವುದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಜನರು ಒಟ್ಟು ಗೂಡುವುದನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈದ್ಗಾಗಳಲ್ಲಿ ಬಕ್ರೀದ್ ದಿನ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಿದ್ದು, ಕೋವಿಡ್ ಮಾರ್ಗಸೂಚಿಗಳ ಷರತ್ತಿಗೊಳಪಟ್ಟು ಮಸೀದಿಗಳಲ್ಲಿ ಮಾತ್ರ ಕನಿಷ್ಟ ಭಕ್ತಾದಿಗಳೊಂದಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿರುತ್ತದೆ.
ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ವಹಿಸುವ ಮೊದಲು ಆಡಳಿತ ಮಂಡಳಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು. ಬಕ್ರೀದ್ ಹಬ್ಬದ ಆಚರಣೆ, ಧಾರ್ಮಿಕ ಚಟುವಟಿಕೆ ಸಂದರ್ಭಗಳಲ್ಲಿ ಪ್ರಾಣಿ ವಧೆ ಮತ್ತು ಬಲಿದಾನ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಯಾಕುಬ್ ಮಾಹಿತಿ ನೀಡಿದ್ದಾರೆ.
ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವ ಮೂಲಕ ಸರಳ, ಆರೋಗ್ಯ ಪೂರ್ಣ ಬಕ್ರೀದ್ ಹಬ್ಬ ಆಚರಿಸುವಂತೆ ಅವರು ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss