ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ವಿಜಯಪುರ:
ಜಿಲ್ಲೆಯಲ್ಲಿ ಕೊರೋನಾ ಸಾವು, ನೋವು ನಿಯಂತ್ರಣದಲ್ಲಿ ಜಿಲ್ಲಾಡಳಿತ ಹೆಣಗುತ್ತಿರುವುದರ ಮಧ್ಯೆ, ನಗರದಲ್ಲಿ ಬುಧವಾರ ಬೆಳಗ್ಗೆ ಮತ್ತೆ ಹಲವು ಅಂಗಡಿಗಳನ್ನು ತೆರೆಯುವ ಮೂಲಕ ಅಂಗಡಿ ಮಾಲೀಕರು ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ ತೂರಿದ್ದಾರೆ.
ಇಲ್ಲಿನ ಬಾಗಲಕೋಟೆ ರಸ್ತೆಯ ಕೋರ್ಟ್ ಎದುರಿನ ರಸ್ತೆ ಬದಿಯ ಝರಾಕ್ಸ್ ಅಂಗಡಿ, ಫೋಟೋ ಸ್ಟುಡಿಯೋ, ಪಾನ್ ಶಾಪ್ ಹಾಗೂ ಗಾಂಧಿಚೌಕ್ ರಸ್ತೆಯಲ್ಲಿನ ಟೈಲರಿಂಗ್ ಅಂಗಡಿ ಸೇರಿದಂತೆ ಹಲವಾರು ಅಂಗಡಿಗಳನ್ನು ತೆರೆಯಲಾಗಿದೆ.
ದಿನಸಿ ವ್ಯಾಪಾರಕ್ಕೆ ಮಾತ್ರ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಅವಕಾಶ ನೀಡಲಾಗಿದ್ದು, ಈ ಅಂಗಡಿಗಳ ಜೊತೆಗೆ ಇತರೆ ಅಂಗಡಿಗಳು ತೆರೆದು, ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ.
ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳಗೊಂಡಿದ್ದು, ಸೋಂಕಿತರ ಚಿಕಿತ್ಸೆಗೆ ಬೆಡ್, ಆಕ್ಸಿಜನ್, ರೆಮಿಡಿಸಿವರ್ ಔಷಧ ಸಕಾಲಕ್ಕೆ ಲಭಿಸದೆ ಹಲವು ಜನರು ಮೃತಪಡುತ್ತಿದ್ದಾರೆ. ಇಂತಹ ಸಂದರ್ಭ ಕೋವಿಡ್ ನಿಯಮ ಉಲ್ಲಂಘನೆ ಮತ್ತಷ್ಟು ಗಂಡಾಂತರಕ್ಕೆ ಎಡೆಯಾಗಿದ್ದು, ಜಿಲ್ಲಾಡಳಿತ ಇನ್ನಷ್ಟು ಗಂಭೀರತೆ ವಹಿಸಿ ಕಟ್ಟುನಿಟ್ಟಾಗಿ, ಕೋವಿಡ್ ನಿಯಮ ಜಾರಿಗೊಳಿಸಬೇಕಿದೆ.