Monday, August 8, 2022

Latest Posts

18- 44 ವರ್ಷದವರಿಗೆ ಕೋವಿಡ್ ಲಸಿಕೆ ನೀಡಿಕೆ ಸ್ಥಗಿತ, ಎರಡನೇ ಡೋಸ್ ನೀಡಿಕೆಗೆ ಆದ್ಯತೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಚಿತ್ರದುರ್ಗ:

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಅದರಂತೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದ ಗಾಬರಿಗೊಂಡ ಜನರು ಲಸಿಕೆ ಹಾಕಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಗಳಿಗೆ ಮುಗಿ ಬೀಳುತ್ತಿದ್ದಾರೆ. ಲಸಿಕೆ ಪ್ರಮಾಣ ಸಾಕಷ್ಟು ಲಭ್ಯವಿಲ್ಲದ ಕಾರಣ ಅನೇಕರು ನಿರಾಸೆಯಿಂದ ಮನೆಗೆ ಮರಳುವಂತಾಗಿದೆ. ಇದರಿಂದಾಗಿ ಮೇ 14 ರಿಂದ 18 ರಿಂದ 44 ವರ್ಷದವರಿಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗುವುದು.
ಕೊರೋನಾ ವಾರಿಯರ‍್ಸ್‌ಗಳ ನಂತರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಸಾರ್ವಜನಿಕವಾಗಿ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಆದರೆ, ಆರಂಭದ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವದಂತಿಯಿಂದಾಗಿ ಲಸಿಕೆ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕಿದರು. ಅದರ ಮಹತ್ವ ಅರಿವಾದ ನಂತರ ಲಸಿಕಾ ಕೇಂದ್ರಗಳತ್ತ ಮುಖಮಾಡಿದ್ದು, ಬೇಡಿಕೆಯೂ ಹೆಚ್ಚಾಗುತ್ತಿದೆ.
ಕೋವಿಡ್ ಅನ್ನು ಸಮರ್ಥವಾಗಿ ಎದುರಿಸಲು ಲಸಿಕೆ ಹಾಕಿಸಿಕೊಳ್ಳಿ ಎಂದು ಮಾರ್ಚ್‌ನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜಾಗೃತಿ ಮೂಡಿಸುವ ಜತೆಗೆ ಮನವಿ ಮಾಡಿದ್ದರು. ಆದರೆ, ಈ ಅವಧಿಯಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆ ಇತ್ತು. ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ಹತ್ತಿರದಲ್ಲೇ ನಗರ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ಬಹುತೇಕರು ಹಿಂದೇಟು ಹಾಕಿದ್ದರು.
ಏಪ್ರಿಲ್ ಮೊದಲ ವಾರದವರೆಗೂ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿತ್ಯ ಎರಡಂಕಿ ಇತ್ತು. ಬೆರಳೆಣಿಕೆಯಷ್ಟು, ಹೆಚ್ಚು ಎಂದರೆ 20 ಪ್ರಕರಣ ಕೂಡ ದಾಟುತ್ತಿರಲಿಲ್ಲ. ಎರಡನೇ ವಾರದ ನಂತರ ಕೋವಿಡ್ ಶರವೇಗದಲ್ಲಿ ಹರಡುತ್ತಿದ್ದು, ಎಚ್ಚೆತ್ತ ಹಲವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಈಗ ಬೇಕೆಂದರೂ ಲಸಿಕೆ ಸಿಗುತ್ತಿಲ್ಲ. ಒಂದು ವೇಳೆ ಕೆಲವೆಡೆ ಸಿಕ್ಕರೂ ಸರತಿಯಲ್ಲಿ ಗಂಟೆಗಟ್ಟಲೇ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ವ್ಯಾಕ್ಸಿನ್ ಬಂದ ಎರಡು ದಿನದೊಳಗೆ ಖಾಲಿಯಾಗುತ್ತಿದೆ. ಏ. 29 ರಂದು ೮ಸಾವಿರ ಡೋಸ್ ಬಂದಿತ್ತು. ಲಸಿಕಾ ಕೇಂದ್ರಗಳ ಬಳಿ ಜನ ಮುಗಿಬಿದ್ದಿದ್ದರಿಂದ ಎರಡೇ ದಿನದಲ್ಲಿ ಖಾಲಿಯಾಗಿದೆ. ಸರ್ಕಾರ ಆಯಾ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಶೇ 60ಕ್ಕಿಂತ ಹೆಚ್ಚು ಜನರಿಗೆ ಲಸಿಕೆ ಹಾಕಬೇಕು ಎಂಬುದಾಗಿ ಗುರಿ ನಿಗದಿ ಮಾಡಿದೆ. ಜಿಲ್ಲೆಯ ಜನಸಂಖ್ಯೆ 18 ಲಕ್ಷಕ್ಕೂ ಹೆಚ್ಚಿದ್ದು, ಕನಿಷ್ಠ 9.5 ಲಕ್ಷದಿಂದ 10 ಲಕ್ಷ ಜನರಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಗುರಿ ಇಟ್ಟುಕೊಂಡಿದೆ. ಅದಕ್ಕಾಗಿ ಸಮುದಾಯದವರನ್ನು ಸಂಪರ್ಕಿಸಿ ಲಸಿಕೆ ಹಾಕಲು ಮುಂದಾಗಿದೆ. ಇದರಿಂದಾಗಿಯೂ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.
ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 100 ಲಸಿಕೆ ಹಂಚಿಕೆಯಾಗುತ್ತಿದ್ದು, ಈಗ ೨೦೦ಕ್ಕೂ ಹೆಚ್ಚು ಜನ ಲಸಿಕೆ ಪಡೆಯಲು ಬರುತ್ತಿರುವುದರಿಂದ ಲಸಿಕೆ ಪೂರೈಕೆಯಾದ ದಿನವೇ ಖಾಲಿಯಾಗುತ್ತಿವೆ. ಜಿಲ್ಲೆಯಿಂದ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗೂ ಲಸಿಕೆ ರವಾನೆಯಾಗಿದೆ. ಜ.14 ರಿಂದ ಮೇ 19 ರವರೆಗೆ ಜಿಲ್ಲೆಗೆ 246320 ಕೋವಿಶೀಲ್ಡ್ ಲಸಿಕೆ ಬಂದಿದ್ದು, 243950 ಖರ್ಚಾಗಿದೆ. 32,600 ಕೋವ್ಯಾಕ್ಸಿನ್ ಲಸಿಕೆ ಬಂದಿದ್ದು, 32,100 ಖರ್ಚಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss