Monday, August 8, 2022

Latest Posts

ಗೊಬ್ಬರ ಗೋದಾಮು ಬಳಿ ಹಸು ಸಾವು: ವಿಷಪೂರಿತ ಹೊಟ್ಟು‌ ಸೇವಿಸಿ‌ ಮೃತಪಟ್ಟಿರುವ ಶಂಕೆ

ದಿಗಂತ ವರದಿ ಕುಶಾಲನಗರ:

ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದಲ್ಲಿರುವ ಗೊಬ್ಬರದ ಗೋದಾಮು ಬಳಿ ಹಸುವೊಂದು ಸಾವನ್ನಪ್ಪಿರುವ ಘಟನೆ ನಡೆದಿದ್ದು, ವಿಷಪೂರಿತ ಭತ್ತದ ಹೊಟ್ಟು ಸೇವಿಸಿ
ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸುಂದರನಗರದ ಪೌಲಸ್ ಎಂಬವರಿಗೆ ಸೇರಿದ 6ವರ್ಷದ ಹಸು ಸಾವನ್ನಪ್ಪಿದೆ. ಎಂದಿನಂತೆ ಮೇಯಲು ಬಿಟ್ಟ ಹಸು, ರಾತ್ರಿಯಾದರೂ ಕಾಣದ ಹಿನ್ನೆಲೆಯಲ್ಲಿ ಹಸುವಿನ ಮಾಲಕ ಹುಡುಕಾಡಿದ್ದು, ಗರ್ಭಿಣಿ ಹಸುವು ಸುಂದರನಗರದ ಉಗ್ರಾಣದ ಬಳಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿದೆ.
ಘಟನೆ ಬಗ್ಗೆ ಹಸುವಿನ ಮಾಲಕ ಪಂಚಾಯಿತಿಗೆ ಮಾಹಿತಿ ನೀಡಿದ್ದು, ಗ್ರಾ.ಪಂ ಅಧ್ಯಕ್ಷೆ ಇಂದಿರಾ ರಮೇಶ್, ವಾರ್ಡ್ ಸದಸ್ಯರಾದ ಕೆ.ಬಿ.ಷಂಶುದ್ದೀನ್ ಹಾಗೂ ಆಶಾ ವೆಂಕಟೇಶ್ ಅವರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು. ‌
ಈ ಸಂದರ್ಭ ಗೋದಾಮಿನ ಸಿಬ್ಬಂದಿಯು ಗ್ರಾಮಸ್ಥರೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿ‌ನ ಚಕಮಕಿ ನಡೆಯಿತು.ಈ ಸಂದರ್ಭ ಗೋದಾಮು ವ್ಯವಸ್ಥಾಪಕ ಸ್ಥಳಕ್ಕಾಗಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಹಸುವು ಸ್ಥಳದಲ್ಲಿದ್ದ ವಿಷಪೂರಿತ ಭತ್ತದ ಹೊಟ್ಟು ತಿಂದು ಸಾವನ್ನಪ್ಪಿರುವ ಬಗ್ಗೆ ಗ್ರಾಮಸ್ಥರು ಆರೋಪಿಸಿದ್ದು, ಕೂಡಲೇ ಸಂಬಂಧಪಟ್ಟವರು ಪರಿಹಾರ ಒದಗಿಸಿಕೊಡಬೇಕು ಎಂದು ಗ್ರಾಮಸ್ಥರಾದ ಮಂಜು, ಹರೀಶ್, ಜಯರಾಮ್, ಕುಂಟಣಿ ರಾಜು, ಅರುಣ್ ಆಗ್ರಹಿಸಿದರು.
ಕಳೆದ ಹದಿನೈದು ದಿನಗಳ ಹಿಂದೆ ಇದೇ ರೀತಿ ಹಸು ಸಾವನ್ನಪ್ಪಿದ್ದು, ಹಸುವಿಗೆ ೨೦ ಸಾವಿರ ರೂ ಪರಿಹಾರಧನ ನೀಡಲಾಗಿತ್ತು. ಗೋದಾಮಿನ ಸುತ್ತ ತಂತಿಬೇಲಿ ಅಥವಾ ಕಾಂಪೌಂಡ್ ಇಲ್ಲದ ಕಾರಣ ಹಸು, ಆಡುಗಳು ಇತ್ತ ಮೇಯಲು ಬಂದು ವಿಷ ಬೆರೆತಿರುವ ಭತ್ತದ ಹೊಟ್ಟನ್ನು ತಿಂದು ಸಾವನ್ನಪ್ಪುತ್ತಿವೆ. ಇದಕ್ಕೆ ಗೋದಾಮಿನ ವ್ಯವಸ್ಥಾಪಕರು ನೇರ ಹೊಣೆಗಾರರಾಗಿದ್ದು, ಹಸುವಿನ ಮಾಲಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಘಟನಾ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಹಸುವಿನ ಮಾಲಕರಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು,ಹಸುವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಸ್ಥಳದಲ್ಲಿದ್ದ ಭತ್ತದ ಹೊಟ್ಟನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ದಿನೇಶ್, ಮಣಿ, ಉಪಠಾಣಾಧಿಕಾರಿ ಸ್ವಾಮಿ, ಪೊಲೀಸ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss