Wednesday, June 29, 2022

Latest Posts

ತ್ಯಾಜ್ಯ ನೀರು ಸಂಸ್ಕರಣೆಗೆ ಸಗಣಿ, ಆವಿಷ್ಕಾರಕ್ಕೆ ಸ್ಫೂರ್ತಿಯಾಗಿದೆ ಗೋವಿನ ಜೀರ್ಣಾಂಗ ವ್ಯವಸ್ಥೆ!

(ಚಿತ್ರಕೃಪೆ- ಇಕೊಸ್ಟಾಪ್ ಜಾಲತಾಣ)

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರಿನ ತರುಣ್ ಕುಮಾರ್ ಎಂಬುವವರು ಸುದ್ದಿಯಲ್ಲಿದ್ದಾರೆ. ಕಲುಷಿತ ನೀರನ್ನು ಶುದ್ಧೀಕರಿಸುವಲ್ಲಿ ತರುಣ್ ಅವರು ಅನುಸರಿಸಿರುವ ಆಸಕ್ತಿಕರ ವೈಜ್ಞಾನಿಕ ಕ್ರಮವೊಂದರ ಬಗ್ಗೆ ಬಿಬಿಸಿ ಮಾಧ್ಯಮ ಸೋರಿದಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ. ಇವರ ಆವಿಷ್ಕಾರದ ಬಗ್ಗೆ ಬಿಬಿಸಿ ಪ್ರಸ್ತುತಪಡಿಸಿರುವ ವರದಿಯನ್ನು ಇಲ್ಲಿ ಓದಬಹುದು.

ನಗರಗಳ ಬಹುದೊಡ್ಡ ಸಮಸ್ಯೆ ಆಗಿರುವ ವರ್ಜಿತ ಕೊಳಚೆ ನೀರಿನ ಸಮಸ್ಯೆಗೆ ತರುಣ್ ಕುಮಾರ್ ಅವರ ಇಕೊಸ್ಟಾಪ್ ನವೋದ್ದಿಮೆ ಅನ್ವೇಷಿಸಿರುವ ಪರಿಹಾರದ ಮುಖ್ಯ ಭಾಗ ಏನು ಗೊತ್ತೇ? ಗೋವಿನ ಸಗಣಿ!

 

ಈಗಿನ ಕೊಳಚೆ ನೀರು ಸಂಸ್ಕರಣೆ ದುಬಾರಿ

ಚರಂಡಿಯ ಕೊಳಚೆ ನೀರಿನ ನಿರ್ವಹಣೆ ನಗರಗಳ ದೊಡ್ಡ ಸವಾಲು. ಇವು ಇತರ ಮೂಲಗಳೊಂದಿಗೆ ಬೆರಕೆಯಾಗಿ ತಂದೊಡ್ಡುವ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸುವುದಕ್ಕೆ ಇವುಗಳ ಸಂಸ್ಕರಣೆ ಮಾಡಬೇಕಾಗುತ್ತದೆ. ಆದರೆ ಈ ಬಗೆಯ ಸಂಸ್ಕರಣೆಗಳಲ್ಲಿ ಬ್ಯಾಕ್ಟೀರಿಯಾಗಳನ್ನು ಬಳಸಿಕೊಂಡು ಕಲುಷಿತ ನೀರಿನಲ್ಲಿ ವಿಷಕಾರಿಗಳನ್ನು ತಗ್ಗಿಸುವ ಕ್ರಮ ಅನುಸರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಆಗಬೇಕು ಎಂದರೆ ಅದಕ್ಕೆ ನಿರಂತರ ಆಮ್ಲಜನಕ ಪೂರೈಕೆ ಇರಬೇಕು. ಹೀಗಾಗಿ ಇದಕ್ಕೆ ಗಾಳಿ ಬೀಸುವ ಮೋಟಾರುಗಳನ್ನು ಬಳಸುತ್ತಾರೆ. ಒಟ್ಟಾರೆಯಾಗಿ ಇಂಥ ಕೊಳಚೆ ನೀರು ಸಂಸ್ಕರಣೆಗಳ ಯಂತ್ರದ ಬೆಲೆ ಬಹಳ ಹೆಚ್ಚು. ಯಾವಾಗ ಪ್ರಕ್ರಿಯೆಗೆ ವೆಚ್ಚ ಹೆಚ್ಚಾಗುತ್ತದೋ ಆಗ ಚರಂಡಿ ನೀರು ನಿರ್ವಹಣೆ ಮಾಡಬೇಕಾದವರು ಅದನ್ನು ಮಾಡದೇ ಇರುವುದು, ಅಥವಾ ನೆಪ ಮಾತ್ರಕ್ಕೆ ಅಂಥ ವ್ಯವಸ್ಥೆ ಇಟ್ಟಿರುವುದು ಇಂಥವೆಲ್ಲ ಆಗತೊಡಗುತ್ತವೆ. 

ಸಗಣಿಯನ್ನು ನೀರುಶುದ್ಧಿಗೆ ಬಳಸುವ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ?

ತರುಣ್ ಕುಮಾರ್ ಅವರ ಇಕೊಸ್ಟಾಪ್ ಟೆಕ್ನಾಲಜಿ ಎಂಬ ನವೋದ್ದಿಮೆ ಗೋವಿನ ಜಠರ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಆಧಾರದ ಮೇಲೆ ಹಾಗೂ ಸಗಣಿಯನ್ನು ಬಳಸಿಕೊಂಡು ಕೊಳಚೆ ನೀರಿನ ಸಂಸ್ಕರಣೆ ವಿಧಾನವನ್ನು ರೂಪಿಸಿದೆ. ಇದು ಇವತ್ತು ಬಳಕೆಯಲ್ಲಿರುವ ಶುದ್ಧೀಕರಣ ಯಂತ್ರಗಳಿಗಿಂತ ಕಡಿಮೆ ವೆಚ್ಚದ್ದು. 

ಗೋವಿನ ಜಠರ ವ್ಯವಸ್ಥೆಯಲ್ಲಿ ನಾಲ್ಕು ಚೇಂಬರುಗಳಿರುತ್ತವೆ. ಇಲ್ಲಿರುವ ಬ್ಯಾಕ್ಟೀರಿಯಾಕ್ಕೆ ಆಮ್ಲಜನಕ ಒದಗಿಸಬೇಕಿಲ್ಲ. ಹುಲ್ಲು ಈ ವ್ಯವಸ್ಥೆಯೊಳಗೆ ಸಂಚರಿಸುತ್ತ ಹೋದಂತೆ ಈ ಬ್ಯಾಕ್ಟೀರಿಯಾಗಳು ಅದನ್ನು ಗ್ಯಾಸ್, ಪೋಷಕಾಂಶ, ನೀರು ಮತ್ತು ತ್ಯಾಜ್ಯವಾಗಿ ಮಾರ್ಪಡಿಸುತ್ತವೆ. 

ಇದೇ ವ್ಯವಸ್ಥೆಯನ್ನು ಅನುಕರಿಸಿ ಕೊಳಚೆ ನೀರಿನ ಸಂಸ್ಕರಣೆಗೆ ಯಂತ್ರ ಮಾಡುವಲ್ಲಿ ಯಶಸ್ವಿಯಾಗಿದೆ ತರುಣ್ ಕುಮಾರ್ ಅವರ ನವೋದ್ದಿಮೆ. ಗೋವಿನ ಸಗಣಿಯಲ್ಲಿರುವ ಈ ಬ್ಯಾಕ್ಟೀರಿಯಾಗಳನ್ನೇ ಬಳಸಿಕೊಂಡು ತ್ಯಾಜ್ಯದ ನೀರನ್ನು ಸಂಸ್ಕರಿಸುವ ಮಾದರಿ ತಯಾರಾಗಿದೆ. ಇದಕ್ಕೆ ವಿದ್ಯುತ್ ಅವಶ್ಯವೂ ಇಲ್ಲ. ಏಕೆಂದರೆ ಇದು ಗುರುತ್ವ ಬಲವನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತದೆ. ತ್ಯಾಜ್ಯದ ನೀರಿನಲ್ಲಿರುವ ಘನ ಪದಾರ್ಥ ಒಂದೆಡೆ ಉಳಿಯುತ್ತದೆ. ನಂತರದ ಭಾಗದಲ್ಲಿ ಅನಿಲ ಮತ್ತು ನೀರನ್ನು ಬ್ಯಾಕ್ಟೀರಿಯಾಗಳು ಬೇರ್ಪಡಿಸುತ್ತವೆ. ಹೊರಬಂದ ನೀರು ಅನೇಕ ಕಾರ್ಯಗಳಲ್ಲಿ ಮರುಬಳಕೆಗೆ ಯೋಗ್ಯವಾಗಿರುತ್ತದೆ. 

 

ಅಂದಹಾಗೆ, ಆಕಳಿನ ಸಗಣಿ ಉಪಯೋಗಿಸಿಕೊಂಡು ತ್ಯಾಜ್ಯದ ನೀರನ್ನು ಸಂಸ್ಕರಿಸುವ ಪರಿಣಾಮವನ್ನು ಸಾರುವ ಹಲವು ಅಧ್ಯಯನಗಳನ್ನು ಈಗಾಗಲೇ ಅನೇಕ ಸಂಸ್ಥೆಗಳು ಮಾಡಿದ್ದು, ಅವುಗಳ ವಿಸ್ತೃತ ದಾಖಲೆಗಳು ಅಂತರ್ಜಾಲದಲ್ಲಿ ಲಭ್ಯ ಇವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss