Monday, July 4, 2022

Latest Posts

ಹಸುವಿನ ಹೊಟ್ಟೆಯನ್ನೇ ಸೀಳಿದ ಒಂಟಿ ಸಲಗ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಮಡಿಕೇರಿ:

ರೈತರೊಬ್ಬರ ಮೇಲೆ ದಾಳಿ ಮಾಡಲು ವಿಫಲವಾದ ಕಾಡಾನೆಯೊಂದು ಪಕ್ಕದಲ್ಲೇ ಇದ್ದ ಹಸುವಿನ ಹೊಟ್ಟೆಯನ್ನು ಸೀಳಿ ಕೊಂದು ಹಾಕಿರುವ ಘಟನೆ ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ 7.30 ಗಂಟೆ ಸುಮಾರಿನಲ್ಲಿ ರೈತ ಬಿ.ಎಂ.ಕೃಷ್ಣಪ್ಪ(ಅಚ್ಚು) ಅವರು ಗದ್ದೆ ಬಳಿ ಹಸುವನ್ನು ಮೇಯಲೆಂದು ಕಟ್ಟಿ ಹಾಕುತ್ತಿದ್ದ ಸಂದರ್ಭ ಒಂಟಿ ಸಲಗ ದಾಳಿ ಮಾಡಿದೆ. ತಕ್ಷಣ ಎಚ್ಚೆತ್ತುಕೊಂಡ ಕೃಷ್ಣಪ್ಪ ಅವರು ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅಲ್ಲೇ ಇದ್ದ ಹಸು ಕಾಡಾನೆ ದಾಳಿಗೆ ತುತ್ತಾಗಿದೆ. ತನ್ನ ದಂತದಿಂದ ಹಸುವಿನ ಹೊಟ್ಟೆಯ ಭಾಗವನ್ನು ಸೀಳಿದ ಆನೆ ಗ್ರಾಮಸ್ಥರ ಬೊಬ್ಬೆ ಕೇಳಿ ಓಡಿ ಹೋಗಿದೆ.
ಕೆಲವು ಗಂಟೆಗಳ ಕಾಲ ನರಳಾಡಿದ ಹಸು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಕ್ಷಣ ಒಂಟಿ ಸಲಗವನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾ.ಪಂ ಸದಸ್ಯ ಮನು ಮಹೇಶ್ ಮಾತನಾಡಿ, ನಿರಂತರವಾಗಿ ಕಾಡಾನೆಗಳ ದಾಳಿ ನಡೆಯುತ್ತಿದ್ದು, ಸಾವು ನೋವುಗಳು ಸಂಭವಿಸುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.
ರೈಲ್ವೆ ಕಂಬಿಗಳಿಂದ ನಿರ್ಮಿಸುತ್ತಿರುವ ಕಾಡಾನೆ ತಡೆಬೇಲಿ ಕಾಮಗಾರಿ ಅರ್ಧದಲ್ಲೇ ನಿಂತಿದ್ದು, ಗ್ರಾಮಸ್ಥರು ನಿತ್ಯ ಭಯದ ವಾತಾವರಣದಲ್ಲೇ ದಿನ ದೂಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿಕ ಮುಂಡ್ರಮನೆ ಸುದೇಶ್ ಮಾತನಾಡಿ, ಮಳೆಗಾಲ ಆರಂಭಗೊಂಡಿದ್ದು, ಗದ್ದೆ ಕೆಲಸದಲ್ಲಿ ತೊಡಗಬೇಕಾಗಿದೆ. ಆದರೆ ಕಾಡಾನೆಗಳ ಆತಂಕದಿಂದ ಕಾರ್ಮಿಕರೇ ಬರುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ತಕ್ಷಣ ಪುಂಡಾನೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿಯಬೇಕು ಅಥವಾ ಈ ಪ್ರದೇಶದಿಂದ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss