CPL 2022 | ಚೊಚ್ಚಲ ಫೈನಲ್‌ ಪ್ರವೇಶಿಸಿದ ರಾಜಸ್ತಾನ್‌ ರಾಯಲ್ಸ್‌ ಒಡೆತನದ ಬಾರ್ಬಡೋಸ್ ರಾಯಲ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ ಚೊಚ್ಚಲ ಆವೃತ್ತಿಯ ಚಾಂಪಿಯನ್‌ ರಾಜಸ್ಥಾನ್‌ ರಾಯಲ್ಸ್‌ ಪ್ರಾಂಚೈಸಿಗೆ 2022 ನೆನಪಿಡುವಂತಹ ವರ್ಷ. ಈ ಬಾರಿಯ ಐಪಿಎಲ್‌ ನಲ್ಲಿ ಆರ್‌ಆರ್ ತಂಡ ಫೈನಲ್‌ ಪ್ರವೇಶಿಸಿತ್ತು. ಇದೀಗ ವೆಸ್ಟ್‌ ಇಂಡೀಸ್‌ ನಲ್ಲಿ ಸಾಗುತ್ತಿರುವ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ನಲ್ಲಿ ರಾಯಲ್‌ ಪ್ರಾಂಚೈಸಿ ಒಡೆತನದ ಬಾರ್ಬಡೋಸ್‌ ರಾಯಲ್ಸ್‌ ತಂಡ ಚೊಚ್ಚಲ ಪೈನಲ್‌ ಪ್ರವೇಶಿಸುವ ಮೂಲಕ ಸಾಧನೆ ಬರೆದಿದೆ.
ಮಂಗಳವಾರ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧ 87 ರನ್‌ಗಳ ಭರ್ಜರಿ ಜಯದೊಂದಿಗೆ ಬಾರ್ಬಡೋಸ್ ರಾಯಲ್ಸ್ ಹೀರೋ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಫೈನಲ್‌ ಪ್ರವೇಶಿಸಿದೆ.
ಟಾಸ್ ಗೆದ್ದ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ನಾಯಕ ಶಿಮ್ರಾನ್‌ ಹೆಟ್ಮೈರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬಾರ್ಬಡೋಸ್ ಪರ ಇನ್ನಿಂಗ್ಸ್‌ ಆರಂಭಿಸಿದ ರಹಕೀಮ್ ಕಾರ್ನ್‌ವಾಲ್ ಅಕ್ಷರಶಃ ಸ್ಫೋಟಿಸಿದರು. ಕೇವಲ 54 ಎಸೆತಗಳಲ್ಲಿ 11 ಭರ್ಜರಿ ಸಿಕ್ಸರ್‌ಗಳಿದ್ದ 91 ರನ್‌ ಸಿಡಿಸಿದರು. ಮತ್ತೊಂದು ತುದಿಯಲ್ಲಿದ್ದ ಅಜಮ್ ಖಾನ್ ಅವರಿಗೆ ಸೂಕ್ತ ಬೆಂಬಲ ನೀಡಿ 35 ಎಸೆತಗಳಲ್ಲಿ 4 ಸಿಕ್ಸ್​ ಹಾಗೂ 3 ಫೋರ್​ನೊಂದಿಗೆ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.ಇದರಿಂದಾಗಿ ಬಾರ್ಬಡೋಸ್ ರಾಯಲ್ಸ್ ನಿಗದಿತ 20 ಓವರ್‌ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 195 ರನ್‌ ಗಳ ಬೃಹತ್‌ ಮೊತ್ತವನ್ನು ಕಲೆಹಾಕಿತು.
ಗುರಿ ಬೆನ್ನತ್ತಿದ ಗಯಾನಾ ವಾರಿಯರ್ಸ್ ಗೆ ಪ್ರಮುಖ ಬ್ಯಾಟ್ಸ್‌ ಮನ್‌ ಗಳು ಕೈಕೊಟ್ಟರು. ಶಿಮ್ರಾನ್ ಹೆಟ್ಮೆಯರ್ 29 ಎಸೆತಗಳಲ್ಲಿ 37 ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟ್ಸ್‌ ಮನ್‌ ಕೂಡಾ ಕ್ರೀಸ್‌ ನಲ್ಲಿ ತಳವೂರಿ ನಿಲ್ಲುವ ಪ್ರಯತ್ನ ನಡೆಸಲಿಲ್ಲ. ಮೊದಲ ಪವರ್‌ಪ್ಲೇ ಅಂತ್ಯದ ವೇಳೆಗೆ ನಾಲ್ಕು ವಿಕೆಟ್‌ಗಳಿಗೆ 36 ರನ್ ಗಳಿಸಿದ್ದ ಗಯಾನ ಆ ಬಳಿಕವೂ ಚೇತರಿಕೆ ಕಾಣಲಿಲ್ಲ. ಅಂತಿಮವಾಗಿ ಗಯಾನ 17.4 ಓವರ್‌ಗಳಲ್ಲಿ ಕೇವಲ 108 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಬಾರ್ಬಡೋಸ್‌ ಪರ ಉತ್ತಮ ಬೌಲಿಂಗ್‌ ಪ್ರದರ್ಶಿಸಿದ ರೇಮನ್ ಸಿಮಂಡ್ಸ್ ನಾಲ್ಕು ಓವರ್‌ಗಳಲ್ಲಿ 17 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಕಾರ್ನ್‌ವಾಲ್ 2 ಓವರ್‌ ನಲ್ಲಿ 10 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್‌:
ಬಾರ್ಬಡೋಸ್ ರಾಯಲ್ಸ್ 195/5 (ಕಾರ್ನ್‌ವಾಲ್ 91, ಖಾನ್ 52; ಶೆಫರ್ಡ್ 2/29, ಸಿಂಕ್ಲೇರ್ 1/8).
ಗಯಾನಾ ಅಮೆಜಾನ್ ವಾರಿಯರ್ಸ್ 108 ಆಲೌಟ್: (ಹೆಟ್ಮೆಯರ್ 37, ಹೋಪ್ 21; ಸಿಮಂಡ್ಸ್ 3/17, ಕಾರ್ನ್‌ವಾಲ್ 2/10).

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!