ವಿಂಡೀಸ್‌ ನೆಲದಲ್ಲಿ 39 ವರ್ಷದ ಬಳಿಕ ಕ್ಲೀನ್‌ ಸ್ವೀಪ್:‌ ಐತಿಹಾಸಿಕ ಸರಣಿ ಗೆದ್ದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಟ್ರಿನಿಡಾಡ್‌ ನ ಕ್ವಿನ್ಸ್‌ ಪಾರ್ಕ್‌ ಓವೆಲ್‌ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 117 ರನ್ ಗಳ ಭರ್ಜರಿ ಜಯ ದಾಖಲಿಸಿದ ಭಾರತ ಐತಿಹಾಸಿಕ ಸರಣಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಶುಭಮನ್ ಗಿಲ್( 98 ನಾಟೌಟ್),  ಶಿಖರ್ ಧವನ್ (58),  ಶ್ರೇಯಸ್ ಅಯ್ಯರ್ (44) ಅಮೋಘ ಬ್ಯಾಟಿಂಗ್‌ ಬಲದಿಂದ 36 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು.  ಡಕ್ವರ್ಥ್‌ ಲೂಯಿಸ್‌ ನಿಯಮದ ಪ್ರಕಾರ 35 ಓವರ್‌ಗಳಲ್ಲಿ 226 ರನ್‍ಗಳ ಗುರಿಹೊತ್ತು ಚೇಸಿಂಗ್‌ ಗೆ ಇಳಿದ ವಿಂಡೀಸ್, ಭಾರತದ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿ 26 ಓವರ್‌ಗಳಲ್ಲಿ ಕೇವಲ 137 ರನ್‍ಗಳಿಗೆ ಸರ್ವಪತನಗೊಂಡಿತು. ವಿಡೀಸ್‌ ಪರ  ಬ್ರೆಂಡನ್ ಕಿಂಗ್ 42 ರನ್ ಮತ್ತು ನಿಕೋಲಸ್ ಪೂರನ್ 42 ರನ್ ಮಾತ್ರವೇ ಟೀಂ ಇಂಡಿಯಾ ಬೌಲರ್‌ ಗಳಿಗೆ ಪ್ರತಿರೋಧ ಒಡ್ಡಿದರು.
3-0 ಅಂತರದಲ್ಲಿ ಸರಣಿ ಗೆಲುವು ಕಂಡ ಭಾರತ ಬರೋಬ್ಬರಿ 39 ವರ್ಷಗಳ ಬಳಿಕ ವಿಂಡೀಸ್‌ ನೆಲದಲ್ಲಿ ಏಕದಿನ ಸರಣಿಯನ್ನು ವೈಟ್‌ ವಾಶ್‌ ಮಾಡಿದ ಸಾಧನೆ ಮಾಡಿದೆ. 1983ರಲ್ಲಿ ವಿಂಡೀಸ್‌ ನೆಲದಲ್ಲಿ ಪ್ರಥಮ ಏಕದಿನ ಪಂದ್ಯವಾಡಿದ್ದ ಭಾರತ, ಇದೇ ಮೊದಲ ಬಾರಿಗೆ ಸರಣಿ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಜೊತೆಗೆ ವಿಂಡೀಸ್ ನೆಲದಲ್ಲಿ ಸತತ 12 ಏಕದಿನ ಸರಣಿ ಜಯಿಸುವ ಮೂಲಕ, ಯಾವುದೇ ಎದುರಾಳಿ ವಿರುದ್ಧ 12 ಸರಣಿಯನ್ನು ಸತತವಾಗಿ ಗೆದ್ದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದ ಪರ ಮ್ಯಾಜಿಕ್‌ ಸ್ಪೆಲ್‌ ಮಾಡಿದ ಚಹಲ್ 4 ಓವರ್ ಗಳಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಕಬಳಿಸಿದರು. ವೇಗಿಗಳಾದ ಸಿರಾಜ್, ಠಾಕೂರ್ ತಲಾ 2 ವಿಕೆಟ್ ಗಳಿಸಿದರೆ, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಕಿತ್ತು ಮಿಂಚಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!