ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಅಣಿಯಾಗಿರುವ ಮೊಟೇರಾ ಕ್ರೀಡಾಂಗಣವು ಇಂಗ್ಲೆಂಡ್ ಆಟಗಾರರ ಮನಸೂರೆಗೊಂಡಿದೆ. ಇಂಗ್ಲಿಷ್ ಆಟಗಾರರು ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದು ಮೈದಾನದ ವೈಶಿಷ್ಟ್ಯ ಕಂಡು ಬೆರಗಾಗಿದ್ದಾರೆ.
ನವೀಕರಣಗೊಂಡಿರುವ ಮೊಟೇರಾ ಕ್ರೀಡಾಂಗಣವು 1 ಲಕ್ಷದ 10 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಜಗತ್ತಿನಲ್ಲಿ ಅತೀದೊಡ್ಡದ ಕ್ರಿಕೆಟ್ ಸ್ಟೇಡಿಯಂ ಇದು. ನವೀಕರಣಕ್ಕಾಗಿ 2014ರಲ್ಲಿ ಈ ಕ್ರೀಡಾಂಗಣವನ್ನು ಮುಚ್ಚಿದ್ದು ನವೀಕರಣಗೊಂಡ ಬಳಿಕ ಮೊತ್ತಮೊದಲ ಟೆಸ್ಟ್ ಪಂದ್ಯ ನಡೆಯುತ್ತಿರುವುದಾಗಿದೆ.
ಇದೊಂದು ಅದ್ಭುತ ಸ್ಟೇಡಿಯಂ ಎಂಬುದಾಗಿ ಇಂಗ್ಲೆಂಡಿನ ಬೆನ್ ಸ್ಟೋಕ್ಸ್ ಟ್ವೀಟ್ ಮಾಡಿದ್ದಾರೆ. ಅಭ್ಯಾಸ ನಡೆಸುವಾಗ ಸ್ಥಳೀಯ ಸಂಗೀತ ಕೂಡ ಹಾಕುತ್ತಿದ್ದು ಉಲ್ಲಾಸಕರವಾಗಿದೆ ಎಂದೂ ಅವರು ಬರೆದಿದ್ದಾರೆ.
ರಿಶಬ್ ಪಂತ್ ಕೂಡ ಕೊಹ್ಲಿ, ಹಾರ್ದಿಕ್ ಪಾಂಡ್ಯಾ, ಇಶಾಂತ್ ಶರ್ಮಾ ಜತೆಗೆ ಜಿಮ್ನಲ್ಲಿರುವ ಫೋಟೋ ಹಾಕಿದ್ದು ನೂತನ ಮೊಟೇರಾ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿರುವುದು ಚೇತೋಹಾರಿಯಾಗಿದೆ ಎಂದು ಬರೆದಿದ್ದಾರೆ.
“ಮೊಟೇರಾದಲ್ಲಿರುವ ನೂತನ ಸೌಲಭ್ಯಗಳು ಅದ್ಭುತವಾಗಿವೆ. ಅಹಮದಾಬಾದ್ನಲ್ಲಿ ಈ ಬಗೆಯ ವಿಶ್ವದರ್ಜೆಯ ಸೌಲಭ್ಯವನ್ನು ಕ್ರಿಕೆಟಿಗೆ ನೀಡುತ್ತಿರುವುದು ಕಂಡು ಬೆರಗಾಗಿದ್ದೇನೆ” ಎಂದಿದ್ದಾರೆ ಪಂತ್.
ಹಾರ್ದಿಕ್ ಪಾಂಡ್ಯಾ ಕೂಡ ಜಿಮ್ನಲ್ಲಿರುವ ತಮ್ಮ ಫೋಟೋ ಹಾಕಿದ್ದು, ಇಲ್ಲಿನ ಸೌಲಭ್ಯಗಳು ಅತ್ಯಂತ ಸುಸಜ್ಜಿತವಾಗಿವೆ ಎಂದು ಹೇಳಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಕ್ರೀಡಾಂಗಣದಲ್ಲಿರುವುದು ಒಂದು ಅದ್ಭುತ ಅನುಭವ ಎಂದು ಅವರು ಬಣ್ಣಿಸಿದ್ದಾರೆ.