ಹೊಸದಿಗಂತ ವರದಿ, ದಾಂಡೇಲಿ:
ಮೀನು ಹಿಡಿಯಲು ಕಾಳಿ ನದಿಯ ತೀರದಲ್ಲಿ ಗಾಳ ಹಾಕಿ ಕುಳಿತಾಗ ಮೊಸಳೆ ಎಳೆದುಕೊಂಡು ಹೋಗಿದೆ ಎನ್ನಲಾದ ಬಾಲಕನ ಶೋಧ ಕಾರ್ಯ ಸೋಮವಾರ ಮುಂದುವರಿದಿದ್ದು ಮುಂಜಾನೆಯಿಂದಲೇ ಪೊಲೀಸ್, ಅಗ್ನಿಶಾಮಕ, ಅರಣ್ಯ ಇಲಾಖೆಯ ತಂಡಗಳು ಜಂಗಲ್ ಲಾಡ್ಜಸ್ ನ ವಿಶೇಷ ರಾಪ್ಟಿಂಗ್ ತಂಡ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಬಾಲಕನ ಸುಳಿವು ದೊರಕಿಲ್ಲ.
ದಾಂಡೇಲಿಯ ವಿವೇಕನಗರದ ನಿವಾಸಿ ಮೋಹಿನ್ ಮೆಹಬೂಬ್ (15) ಎಂಬ ಬಾಲಕ ರವಿವಾರ ಮದ್ಯಾಹ್ನ ತನ್ನ ಸಹೋದರನೊಂದಿಗೆ ಹಳಿಯಾಳ ರಸ್ತೆ ಬಳಿ ಕಾಳಿ ನದಿಯಲ್ಲಿ ಮೀನು ಹಿಡಿಯಲು ಕುಳಿತಾಗ ಮೊಸಳೆಯೊಂದು ದಾಳಿ ನಡೆಸಿ ಎಳೆದುಕೊಂಡು ಹೋಗಿದ್ದರಿಂದಭಾನುವಾರ ರಾತ್ರಿ 9 ಗಂಟೆ ವರೆಗೆ ಶೋಧ ಕಾರ್ಯ ನಡೆಸಲಾಗಿತ್ತು.
ಸೋಮವಾರ ಕಾರ್ಯಾಚರಣೆ ನಡೆಸುತ್ತಿರುವ ತಂಡಗಳಿಗೆ ನದಿಯಲ್ಲಿ ಮೊಸಳೆಗಳು ಇರುವುದು ಕಂಡು ಬಂದಿದೆಯಾದರೂ ಬಾಲಕನ ಕುರಿತು ಯಾವುದೇ ಸುಳಿವು ದೊರಕಿಲ್ಲ.
ತಹಶೀಲ್ಧಾರ ಶೈಲೇಶ ಪರಮಾನಂದ್, ಡಿ.ವೈ.ಎಸ್. ಪಿ ಗಣೇಶ್, ಸಿ.ಪಿ.ಐ ಪ್ರಭು ಗಂಗಳ್ಳಿ, ಪಿ.ಎಸ್. ಐ ಯಲ್ಲಪ್ಪ ,ವಲಯ ಅರಣ್ಯ ಅಧಿಕಾರಿ ವಿನಾಯಕ ಭಟ್ಟ, ಅಗ್ನಿಶಾಮಕದಳದ ಅಧಿಕಾರಿಗಳು ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.
ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡಿದ್ದು ಬಾಲಕನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.