ಹೊಸದಿಗಂತ ವರದಿ ಮಂಗಳೂರು:
ಪೊಡವಿಗೊಡೆಯನ ನಾಡು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಯ ಸಿದ್ಧತೆ ವೈಭವದಿಂದ ನಡೆಯುತ್ತಿದ್ದು, ಅಷ್ಟಮಿ ವಿಟ್ಲಪಿಂಡಿ ಉತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.
ಇಂದು ಅಪರಾಹ್ನ ನಡೆಯುವ ಅಷ್ಟಮಿ ವಿಟ್ಲಪಿಂಡಿ ಉತ್ಸವಕ್ಕೆ ಬೇಕಾದ ಸಿದ್ಧತೆಗಳು ಪೂರ್ಣಗೊಂಡಿದ್ದು ರಥ ಬೀದಿ ತಳಿರು ತೋರಣಗಳಿಂದ ಕಂಗೊಳಿಸುತ್ತಿದೆ.
ಕೃಷ್ಣನ ನಾಡು ಉಡುಪಿಯಲ್ಲಿ ಅಷ್ಟಮಿಯ ಆಚರಣೆ ಭಿನ್ನವಾಗಿದ್ದು, ಶ್ರೀಕೃಷ್ಣ ದೇವಸ್ಥಾನದಲ್ಲಿ ಜನ್ಮಾಷ್ಟಮಿ ಸಂಭ್ರಮದಿಂದ ನಡೆಯುತ್ತದೆ. ಮಠಕ್ಕೆ ಮುಂಜಾನೆಯಿಂದಲೇ ಸಾವಿರಾರು ಭಕ್ತರು ದೇವರ ದರುಶನಕ್ಕೆ ಆಗಮಿಸುತ್ತಿದ್ದಾರೆ.
ಬಣ್ಣಗಳ ನೀರನ್ನು ಹಾಕಿದ ಮಡಕೆಗಳನ್ನು ಎತ್ತರದಲ್ಲಿ ಕಟ್ಟಿ ಅದನ್ನು ಗೊಲ್ಲ ವೇಷಧಾರಿಗಳು ಒಡೆಯುವ ವಿಟ್ಲಪಿಂಡಿ ಉತ್ಸವಕ್ಕೆ ಸಿದ್ಧತೆಗಳಾಗಿವೆ, ಇಂದು ಮಧ್ಯಾಹ್ನ ಈ ಕಾರ್ಯಕ್ರಮ ನಡೆಯಲಿದೆ. ರಥಬೀದಿಗಳಲ್ಲಿ ಹೂವಿನ ವ್ಯಾಪಾರ, ಆಟಿಕೆ, ಪೇಟ್ಲ ಮಾರಾಟ ನಡೆಯುತ್ತಿದೆ. ಕೃಷ್ಣಮಠದ ಪಾಕಶಾಲೆಯಲ್ಲಿ ಉಂಡೆಗಳು, ಚಕ್ಕುಲಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಿದ್ಧವಾಗಿವೆ. ಈ ಬಾರಿಯ ಅಷ್ಟಮಿಗೆ 3 ಲಕ್ಷ ಉಂಡೆ, 1.25 ಲಕ್ಷ ಚಕ್ಕುಲಿ ಕೃಷ್ಣನಿಗೆ ಸಮರ್ಪಣೆಯಾಗಿ ಭಕ್ತರಿಗೆ ವಿತರಣೆಯಾಗಲಿದೆ.