ಸಿಎಸ್ಆರ್ ನಿಧಿ ಅಡಿ ಕೆನರಾ ಬ್ಯಾಂಕ್ ನಿಂದ ತಿಪಟೂರಿನ ಎರಡು ‘ಸರ್ಕಾರಿ ಶಾಲೆ’ಗೆ ಮಾರುತಿ ಇಕೋ ವಾಹನ

ಹೊಸ ದಿಗಂತ ವರದಿ, ತುಮಕೂರು:

ಸರ್ಕಾರಿ ಮಾದರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರಲು ಕೆನರಾ ಬ್ಯಾಂಕ್ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿಯಡಿ ಒದಗಿಸಿರುವ ಎರಡು ಮಾರುತಿ ಇಕೋ ವಾಹನಗಳನ್ನು ತಿಪಟೂರಿನ ಈಚನೂರು ಹಾಗೂ ಅರಳಗುಪ್ಪೆ ಶಾಲೆಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅವರ ಸಮ್ಮುಖದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳು, ಸರ್ಕಾರಿ ಶಾಲೆಗಳಿಗೆ ಹಸ್ತಾಂತರಿಸಿದರು.
ತಿಪಟೂರಿನ ಕೆನರಾ ಬ್ಯಾಂಕ್ ಶಾಖೆ ಎದುರು ಸೋಮವಾರ (ಮೇ 2) ನಡೆದ ಸರಳ ಕಾರ್ಯಕ್ರಮದಲ್ಲಿ ಎರಡು ವಾಹನಗಳನ್ನು ಶಾಲೆಗಳಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವ ನಾಗೇಶ್ ಅವರು, ಕಡಿಮೆ ಮಕ್ಕಳು ಮತ್ತು ಅಗತ್ಯಕ್ಕಿಂತ ಕಡಿಮೆ ಶಿಕ್ಷಕರಿಂದ ಶಾಲಾ ಮಕ್ಕಳಿಗೆ ಸಿಗಬೇಕಾದ ಸಮಗ್ರ ಶಿಕ್ಷಣ ದೊರಕುತ್ತಿಲ್ಲ. ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಶಿಕ್ಷಣ ಕೊಡುವ ವಿಚಾರದಲ್ಲಿ ನ್ಯಾಯ ಕೊಡಿಸುತ್ತಿದ್ದೇವೆ ಎನಿಸುತ್ತಿಲ್ಲ. ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಮಾದರಿ ಶಾಲೆಗಳ ಯೋಜನೆ ಜಾರಿಗೆ ತರಲಾಗುತ್ತಿದೆ. ಉತ್ತಮ ಮೂಲ ಸೌಕರ್ಯ, ಅಗತ್ಯ ತರಗತಿ ಕೊಠಡಿಗಳು, ಶಿಕ್ಷಕರು ಇರುವ ಶಾಲೆಗಳಿಗೆ ಕಡಿಮೆ ನೋಂದಣಿ ಇರುವ ಶಾಲೆಗಳಿಂದ ಮಕ್ಕಳನ್ನು ಕರೆತರಲು ಪ್ರಯತ್ನಿಸಲಾಗುತ್ತದೆ.
ಮಾದರಿ ಶಾಲೆಗೆ ಮಕ್ಕಳನ್ನು ಕರೆತರಲು ದಾನಿಗಳು, ವಿವಿಧ ಸಂಸ್ಥೆಗಳ ಸಿಎಸ್ಆರ್ ನಿಧಿಯಿಂದ ವಾಹನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅದರ ಮೊದಲ ಹೆಜ್ಜೆಯಾಗಿ ತಿಪಟೂರಿನ ಈಚನೂರು ಹಾಗೂ ಅರಳಗುಪ್ಪೆ ಶಾಲೆಗಳಿಗೆ ಮಕ್ಕಳನ್ನು ತರಲು ಕೆನರಾ ಬ್ಯಾಂಕ್ ಎರಡು ವಾಹನಗಳನ್ನು ಒದಗಿಸಿದೆ ಎಂದು ಸಚಿವರು ಹೇಳಿದರು.
ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಉತ್ತಮ ಶಾಲೆಗೆ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿರುವ ಶಾಲೆಗೆ ಕರೆತಂದರೆ, ಪ್ರತಿ ವಿದ್ಯಾರ್ಥಿಯ ಶಿಕ್ಷಣ ಗುಣಮಟ್ಟ ಹೆಚ್ಚಳ ಮಾಡಬಹುದಾಗಿದೆ. ಈ ಸದುದ್ದೇಶದ ಕುರಿತು ಕೆನರಾ ಬ್ಯಾಂಕ್ ಕೇಳಿಕೊಂಡಾಗ ಅವರು ಸಂತೋಷದಿಂದ ಒಪ್ಪಿಕೊಂಡು ಎರಡು ಮಾರುತಿ ಇಕೋ ವಾಹನಗಳನ್ನು ಒದಗಿಸಿದ್ದಾರೆ ಎಂದು ಸಚಿವರು ತಿಳಿಸಿದರು‌.
ಮಾದರಿ ಸರ್ಕಾರಿ ಶಾಲೆಗೆ ಮಕ್ಕಳ ಪಾಲಕರ ಒಪ್ಪಿಗೆ ಪಡೆದುಕೊಂಡು ಕರೆತರಲಾಗುತ್ತದೆ. ಮಕ್ಕಳ ಭವಿಷ್ಯ ಹಾಗೂ ಶಿಕ್ಷಣ ಇಲಾಖೆ ಸಂಪನ್ಮೂಲಗಳ ಸಮರ್ಪಕ ಬಳಕೆಯ ದೃಷ್ಟಿಯಿಂದ ಸರ್ಕಾರಿ ಮಾದರಿ ಶಾಲೆ ಯೋಜನೆ ರೂಪಿಸಲಾಗಿದೆ.
ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಪಿಕಪ್ ಡ್ರಾಪ್ ಮಾಡಲು ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಸ್ಥೆಗಳು ನೆರವಿಗೆ ಧಾವಿಸುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಸಚಿವರು ಕರೆ ನೀಡಿದರು.
ಕೆನರಾ ಬ್ಯಾಂಕ್ ತುಮಕೂರು ಪ್ರಾದೇಶಿಕ ಸಹಾಯಕ ಮಹಾ ಪ್ರಬಂಧಕರಾದ ಬಿ. ರವಿ ಮತ್ತು ಕೆನರಾ ಬ್ಯಾಂಕ್ ವೃತ್ತ ಕಚೇರಿ ಹಿರಿಯ ವ್ಯವಸ್ಥಾಪಕರಾದ ಎಲ್. ಹರೀಶ್ ಉಪಸ್ಥಿತರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!