ದಿಗಂತ ವರದಿ ಚಿತ್ರದುರ್ಗ:
ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ವ್ಯಾಪಾಕವಾಗಿ ಹೆಚ್ಚುತ್ತಿದೆ. ಇದರಿಂದ ಸೋಂಕಿತರ ಸಂಖ್ಯೆಯೂ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಸೈಬರ್ ಅಪರಾಧ ವಿಭಾಗದ ಪೊಲೀಸ್ ಠಾಣೆ ಅಧಿಕಾರಿಗಳು ಸೋಮವಾರ ಜನ ಜಾಗೃತಿ ಮೂಡಿಸಿದರು. ನಗರದ ವಿವಿಧೆಡೆಗಳಲ್ಲಿ ಸಂಚರಿಸಿ ಜನರಿಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂಬ ಈ ಕುರಿತು ಅರಿವು ಮೂಡಿಸಿದರು.
ನಗರದ ಜೆಸಿಆರ್ ಬಡಾವಣೆಯ ಠಾಣೆಯಿಂದ ಹೊರಟು ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ, ಸ್ಟೇಡಿಯಂ ಕ್ರಾಸ್ ಬಳಿಯ ಚೈತನ್ಯ ವೃತ್ತ, ಆಸ್ಪತ್ರೆ ಸರ್ಕಲ್, ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನೆರೆದಿದ್ದ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ತರಕಾರಿ ಮಾರಾಟ ಮಾಡುವವರು ತಮ್ಮ ಬಳಿ ಬರುವ ಗ್ರಾಹಕರು ಗುಂಪುಗೂಡದಂತೆ ಎಚ್ಚರ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸಬೇಕೆಂದು ತಿಳಿಹೇಳಿದರು.
ನಂತರ ಬಿ.ಡಿ.ರಸ್ತೆ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆ, ಸರ್ಕಾರಿ ಬಸ್ ನಿಲ್ದಾಣ, ಮೆದೇಹಳ್ಳಿ ರಸ್ತೆ, ಸಂತೆ ಹೊಂಡದ ರಸ್ತೆ ಮೂಲಕ ಸಾಗಿದರು. ಅಮೋಘ ಹೊಟೇಲ್, ಬಸವೇಶ್ವರ ಟಾಕೀಸ್ ರಸ್ತೆ, ಗಾಯಿತ್ರಿ ಸರ್ಕಲ್, ಸಂಗಮೇಶ್ವರ ಸ್ಟೋರ್ ಬಳಿ ಅಗತ್ಯ ವಸ್ತುಗಳ ಖರೀದಿ, ಪಕ್ಕದ ಹಣ್ಣಿನ ಅಂಗಡಿ ಬಳಿ ನೆರೆದಿದ್ದ ಜನರಿಗೆ ತಿಳಿಸಿ ಹೇಳಿದರು. ’ಕೈಮುಗಿದು ಬೇಡುತೇವೆ ಹೊರಗೆ ಬರಬ್ಯಾಡ್ರೋ, ಇರೋದೊಂದು ಜೀವ ಕಳಕೊಂಡ ಮೇಲೆ ಮತ್ತೆ ಸಿಗುವುದೋನ್ರೋ, ಅಣ್ಣಾ ಮರಳಿ ಬರುವುದೇನ್ರೋ’ ಎಂಬ ಗೀತೆಯನ್ನು ಮೈಕ್ನಲ್ಲಿ ಜನರಿಗೆ ಕೇಳಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ನಗರದ ವಿವಿಧೆಡೆಗಳಲ್ಲಿ ನೆರೆದಿದ್ದ ವ್ಯಾಪಾರಸ್ಥರು, ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೈಬರ್ ಅಪರಾಧ ವಿಭಾಗದ ವೃತ್ತ ನಿರೀಕ್ಷಕರಾದ ರಮಾಕಾಂತ್ ಹುಲ್ಲೂರ ಮನವಿ ಮಾಡಿದರು. ಮಾಸ್ಕ್ ಧರಿಸದೆ ತಿರುಗಾಡುತ್ತಿದ್ದ ಜನರಿಗೆ ಸರಿಯಾಗಿ ಮಾಸ್ಕ್ ಧರಿಸುವಂತೆ ತಿಳಿಸಿದರು. ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಕಾರ್ಯ ನಿಮಿತ್ತ ಬಂದಲ್ಲಿ ಸಾಧ್ಯವಾದಷ್ಟು ಬೇಗ ಕೆಲಸ ಮುಗಿಸಿ ಮನೆ ಸೇರಿಕೊಳ್ಳಿ. ಹೋದಲ್ಲಿ ಬಂದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮನೆಗೆ ಹೋದ ತಕ್ಷಣ ಶುಭ್ರವಾಗಿ ಕೈ, ಕಾಳು ತೊಳೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸೈಬರ್ ಅಪರಾಧ ವಿಭಾಗದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಂಕರಗೌಡ ಪಾಟೀಲ, ಸಿಬ್ಬಂದಿಗಳಾದ ಜೆ.ಎಸ್.ರವಿಕುಮಾರ್, ಗಂಗಾಧರ್, ಕೆಂಚಪ್ಪ, ಪ್ರವೀಣ್, ಹಿರೇಮಠ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.