Wednesday, August 10, 2022

Latest Posts

ಅಡುಗೆ ಅನಿಲ ಬೆಲೆ ಏರಿಕೆ: ತಲೆ ಮೇಲೆ ಸಿಲಿಂಡರ್ ಹೊತ್ತು ಕಾಂಗ್ರೆಸ್ ಪ್ರತಿಭಟನೆ

ಹೊಸದಿಗಂತ ವರದಿ, ಮೈಸೂರು:

ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರವನ್ನು ನಿರಂತರವಾಗಿ ಏರಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ, ಮಂಗಳವಾರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಲೆ ಮೇಲೆ ಸಿಲಿಂಡರ್ ಹೊತ್ತುಕೊಂಡು ಪ್ರತಿಭಟನೆ ನಡೆಸಿದರು.

ನಗರದ ಚಾಮುಂಡಿಪುರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಧರಣಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಸಿಲೆಂಡರ್ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದನ್ನು ತಡೆಯಲು ವಿಫಲವಾಗಿದೆ. ಬೆಲೆ ಏರಿಕೆಯಿಂದಾಗಿ ದಿನ ನಿತ್ಯ ಬಳಸುವ ಎಲ್ಲಾ ಅಗತ್ಯ ವಸ್ತುಗಳು ಬೆಲೆ ಕೂಡ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಜೀವನ ನಿರ್ವಹಣೆ ಮಾಡಲಾಗದೆ ಸಂಕಷ್ಟಗೀಡಾಗಿದ್ದಾರೆ. ಹೀಗಿದ್ದರೂ ಕೂಡ ಜನರ ಕಷ್ಟಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದೆ ಕುರುಡಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಈ ಹಿಂದಿನ ಯಾವ ಸರ್ಕಾರಗಳ ಆಡಳಿತದಲ್ಲೂ ದಿನಬಳಕೆಯ ವಸ್ತುಗಳು ಹಾಗೂ ಇಂಧನ ಬೆಲೆ ಈ ಪರಿಯಾಗಿ ಏರಿಕೆಯಾಗಿರಲಿಲ್ಲ, ಬೆಲೆ ಏರಿಕೆ ಮಾಡಿ, ಜನ ಸಾಮಾನ್ಯರಿಗೆ ಬರೆ ಹಾಕುತ್ತಲೇ ಅವರ ಬದುಕನ್ನು ದುಸ್ಥಿತಿಗೆ ತಳ್ಳಿರುವುದೇ ಕೇಂದ್ರ ಸರ್ಕಾರದ ಸಾಧನೆಯಾಗಿದೆ ಎಂದು ಪ್ರತಿಭಟನಾಕಾರರು ಹರಿಹಾಯ್ದರು.

ಪ್ರತಿಭಟನೆಯಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರಾಧ್ಯಕ್ಷ ಆರ್ ಮೂರ್ತಿ, ನಗರಪಾಲಿಕೆ ಸದಸ್ಯರುಗಳಾದ ಜೆ ಗೋಪಿ,ಶೋಭಾ ಸುನೀಲ್,ಶಾಂತಕುಮಾರಿ,ಬ್ಲಾಕ್ ಅಧ್ಯಕ್ಷ ಜಿ.ಸೋಮಶೇಖರ್ ,ಶ್ರೀಧರ್,ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ,ಚಿಕ್ಕಣ್ಣ,ಡಾ.ಸುಜಾತರಾವ್,ಕೆಪಿಸಿಸಿ ಸದಸ್ಯರಾದ ವೀಣಾ,ರಾಜು,ಶ್ರೀನಾಥ್ ಬಾಬು,ಲತಾ ಮೋಹನ್,ಬ್ರಾಡ್ ವೇ ಕಿರಣ್,ಡೈರಿ ವೆಂಕಟೇಶ್ ,ಅರ್ಜುನ್,ಹರೀಶ್,ನಟರಾಜು, ಶಿವಮಲ್ಲು,ಭಾಸ್ಕರ್,ನಾಗರತ್ನ ಮಂಜುನಾಥ್, ಪಳನಿ,ಧರ್ಮೇಂದ್ರ,ಸಿದ್ದು,ಪಾಪು,ಫಾರುಖ್,ನಾಸೀರ್,ವಿನಯ್, ವಸಂತ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss