ದ.ಕ. ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರ ಬಂಧನ: ಎಡಿಜಿಪಿ ಅಲೋಕ್‌ ಕುಮಾರ್

ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ರಾಜ್ಯದ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಅವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿಶನಿವಾರ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಶಾಂತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರಕರಣಗಳ ನಿಜವಾದ ಆರೋಪಿಗಳ ಬಂಧನ ಆಗುವ ತನಕ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಪ್ರಕರಣಗಳಲ್ಲಿ ಭಾಗಿಯಾಗಿರದ ಯಾರನ್ನೂ ಬಂಧಿಸುವುದಿಲ್ಲ. ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಎಡಿಜಿಪಿ ನುಡಿದರು.
ಸಂಘಟನೆಗಳ ಮತ್ತು ಸಾರ್ವಜನಿಕರಿಂದ ಕೆಲವು ಸಲಹೆಗಳು ಬಂದಿವೆ. ಅದನ್ನು ಜಾರಿ ಮಾಡಲಾಗುವುದು. ಪೊಲೀಸ್ ಬಂದೋಬಸ್ತ್ ಬಿಗುಗೊಳಿಸುವುದು. ಶಾಂತಿ ಸಭೆಗಳನ್ನು ಆಗಾಗ ನಡೆಸುವುದು, ಮಾದಕ ದ್ರವ ಜಾಲವನ್ನು ಮಟ್ಟ ಹಾಕುವುದು, ನಿರಪರಾಧಿಗಳಿಗೆ ತೊಂದರೆ ಕೊಡದಿರುವಂತೆ ಸಲಹೆಗಳು ಬಂದಿವೆ. ಅವುಗಳನ್ನು ಇಲಾಖೆ ಮತ್ತು ಸರಕಾರ ಪರಿಗಣಿಸಲಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಮೇಲೆ ಮತ್ತು ಕೆಲವೊಂದು ವಿದ್ಯುನ್ಮಾನ ಮಾಧ್ಯಮಗಳ ಮೇಲೆ ನಿಗಾ ಇಡುವಂತೆ ಸಲಹೆಗಳು ಕೇಳಿ ಬಂದಿವೆ. ಸಮಾಜದ ಶಾಂತಿ ಕದಡುವ ಕೃತ್ಯಗಳು ಯಾರಿಂದ ನಡೆದರೂ ಅಂತಹ ವ್ಯಕ್ತಿ, ಮಾಧ್ಯಮಗಳ ವಿರುದ್ಧ ದೂರುಗಳು ಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದವರು ಹೇಳಿದರು.
ಈ ದಿನ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶಾಂತಿ ಸಭೆ ಏರ್ಪಾಡು ಮಾಡಲಾಗಿದೆ. ಒಂದು ವಾರದೊಳಗೆ ಜಿಲ್ಲೆಯ ಜನಪ್ರತಿನಿಧಿಗಳ ಶಾಂತಿ ಸಭೆ ಏರ್ಪಡಿಸಲಾಗುವುದು. ಇಂದಿನ ಸಭೆಗೆ ಗೈರು ಹಾಜರಾಗಿರುವ ಸಂಘಟನೆಗಳನ್ನು ಜೊತೆ ಸೇರಿಸಿಕೊಂಡು ಮುಂದಿನ ದಿನಗಳಲ್ಲಿ ನಿಯತವಾಗಿ ಶಾಂತಿ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!