ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣವಿಲ್ಲ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಕಳೆದ ಒಂಬತ್ತು ತಿಂಗಳಿನಿಂದ ಹೈನುಗಾರರಿಗೆ ಪ್ರೋತ್ಸಾಹಧನ ನೀಡಿಲ್ಲ. ಕ್ಷೀರಧಾರೆ ಯೋಜನೆಯಡಿ ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ ಸರಕಾರ 5 ರೂ. ಪ್ರೋತ್ಸಾಹ ಧನ ನೀಡಬೇಕು, ಈ ಬಗ್ಗೆ ಪ್ರಸ್ತಾವನೆ ಹಣಕಾಸು ಇಲಾಖೆ ಮುಂದೆ ಬಾಕಿಯಿರುವುದರಿಂದ ಐದು ತಿಂಗಳಿಂದ ರೈತರಿಗೆ ಪ್ರೋತ್ಸಾಹಧನ ಪಾವತಿಯಾಗಿಲ್ಲ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಒಪ್ಪಿಕೊಂಡಿದ್ದಾರೆ.
ತಿದಿನ ರಾಜ್ಯಾಧ್ಯಂತ ಒಂದು ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತದೆ. ಹೀಗಾಗಿ ಹೈನುಗಾರಿಕೆಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. 2008ರಲ್ಲಿ ಪ್ರತಿ ಲೀಟರ್‌ಗೆ 2 ರೂ.ನಂತೆ ಹೈನುಗಾರರಿಗೆ ಪ್ರೊತ್ಸಾಹಧನ ನೀಡುವ ಯೋಜನೆ ಆರಂಭಿಸಲಾಗಿತ್ತು. 2013ರಲ್ಲಿ ಲೀಟರ್‌ಗೆ 4 ರೂ.ಗೆ ಏರಿಕೆಯಾಗಿದ್ದು, 2016ರಲ್ಲಿ 5 ರೂ ಏರಿಕೆ ಮಾಡಲಾಯಿತು. 7 ರೂಪಾಯಿಗೆ ಏರಿಸಲು ಕಾಂಗ್ರೆಸ್ ಒಲವು ಹೊಂದಿದ್ದರೂ ಸಾಧ್ಯವಾಗಲಿಲ್ಲ. ವಾಸ್ತವವಾಗಿ 2023ರ ವಿಧಾನಸಭೆ ಚುನಾವಣೆಗೂ ಮುನ್ನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಲೀಟರ್‌ಗೆ 6 ರೂ.ಗೆ ಪ್ರೋತ್ಸಾಹಧನವನ್ನು ಹೆಚ್ಚಿಸುವುದಾಗಿ ಹೇಳಿದ್ದರು. 2024ರ ಜೂನ್‌ನಿಂದ 2024ರ ಅಕ್ಟೋಬರ್‌ವರೆಗೆ ಹಣ ಪಾವತಿ ಮಾಡಿಲ್ಲ, ರೈತರಿಗೆ ಪಾವತಿಸಬೇಕಾದ ಮೊತ್ತ 606.69 ಕೋಟಿ ರೂ.ಬಾಕಿ ಉಳಿದಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಸಮುದಾಯದ ಹೈನುಗಾರರಿಗೆ ಅಕ್ಟೋಬರ್ ತಿಂಗಳಿಗೆ 6.85 ಕೋಟಿ ರೂ. ಹಣ ಪಾವತಿಸಬೇಕಿದ್ದರೆ, ಎಸ್‌ಟಿ ರೈತರಿಗೆ 2024ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಗೆ ಇನ್ನೂ 9 ಕೋಟಿ ರೂ. ಪಾವತಿಯಾಗಬೇಕಿದೆ. ಕಂತುಗಳಲ್ಲಿ ಹಣ ಪಾವತಿಸಲಾಗುವುದುಎಂದು ಹೇಳಿದರು.