Thursday, August 11, 2022

Latest Posts

ಗ್ರಾಮೀಣ ಪ್ರದೇಶದ ಜನರಿಗೆ ಹೈನುಗಾರಿಕೆ ಸೂಕ್ತ ಉದ್ಯಮ: ಸಂಸದ ಡಿ.ಕೆ.ಸುರೇಶ್‌

 ಹೊಸ ದಿಗಂತ ವರದಿ, ರಾಮನಗರ:

ಗ್ರಾಮೀಣ ಭಾಗದ ಜನರ ಜೀವನಕ್ಕೆ ಹೈನುಗಾರಿಕೆ ಉದ್ಯಮ ಸೂಕ್ತ ಎಂದು ಬೆಂ.ಗ್ರಾ. ಸಂಸದ ಡಿ.ಕೆ. ಸುರೇಶ್‌ ಅಭಿಪ್ರಾಯಪಟ್ಟರು.
ತಾಲೂಕಿನ ಹಾರೋಹಳ್ಳಿ ಹೋಬಳಿ ಕಗ್ಗಲಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಬಹುತೇಕ ವಿದ್ಯಾವಂತರಿಗೆ ಇಂದು ಉದ್ಯೋಗ ಸಿಗುತ್ತಿಲ್ಲ. ಹಾರೋಹಳ್ಳಿ ಕೈಗಾರಿಕಾ ಕ್ಷೇತ್ರ ಬೆಳೆದಿದ್ದರೂ, ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಹಾಗಾಗಿ ಯುವಕರು ಪಟ್ಟಣಗಳಲ್ಲಿ ಕೂಲಿಯಾಳಾಗಿ ದುಡಿಯೋ ಬದಲು, ಕೃಷಿ ಮತ್ತು ಹೈನೋದ್ಯಮ ಬಳಕೆ ಮಾಡಿಕೊಂಡು ಉದ್ಯಮವನ್ನಾಗಿ ಪರಿವರ್ತನೆ ಮಾಡಿ ಆರ್ಥಿಕವಾಗಿ ಸ್ಥಿತಿವಂತರಾಗಬೇಕು ಎಂದರು.
ಜಿಲ್ಲೆಯಲ್ಲಿ 22 ಸಾವಿರ ರೈತರು ಹೈನೋದ್ಯಮ 18 ಸಾವಿರ ರೇಷ್ಮೆ ಕೃಷಿಬೆಳೆಗಾರರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಹೈನುಗಾರಿಕೆ ಲಾಭದಾಯಕವಾಗಲಿದೆ. ಭವಿಷ್ಯದಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದರು.
ಗುಣಮಟ್ಟದ ಹಾಲು ಪೂರೈಕೆ ಮಾಡಿ: ಮಾಜಿ ಜಿಪಂ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಮಾತನಾಡಿ. ಕಗ್ಗಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಅಭಿವೃದ್ಧಿಯತ್ತ ಸಾಗುತ್ತಿದೆ. ಕೆಎಂಎಫ್ ನಿಂದ 3 ಲಕ್ಷ,ಹಾಲು ಒಕ್ಕೂಟದಿಂದ 3 ಲಕ್ಷ ವಿಧಾನ ಪರಿಷತ್‌ ಸದಸ್ಯರ ಅನುದಾನದಲ್ಲಿ 2 ಲಕ್ಷ ಹಾಗೂ ಧರ್ಮಸ್ಥಳಗ್ರಾಮಾಭಿವೃದ್ಧಿ ಸಂಸ್ಥೆಯಿಂದ 1 ಲಕ್ಷ ಹಾಗೂ ಸಂಘದ ಹಣವು ಸೇರಿದಂತೆ 18.50 ಲಕ್ಷ ರೂ.ಗಳಲ್ಲಿ ಸುಸಜ್ಜಿತವಾದ ಹಾಗೂ ಸಂಘಕ್ಕೆ ಆದಾಯವನ್ನು ತಂದು ಕೊಡುವ ರೀತಿಯಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡಿ ನಿಮ್ಮ ಆದಾಯವನ್ನು ವೃದ್ಧಿಮಾಡಿಕೊಂಡು ಸಂಘದ ಬೆಳವಣಿಗೆಗೂ ಸಹಕಾರ ನೀಡಬೇಕು ಎಂದರು.
ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಜಿಪಂ ಸದಸ್ಯ ನಾಗರಾಜು, ಹಾಲು ಒಕ್ಕೂಟದ ನಿರ್ದೇಶಕ ಹರೀಶ್‌ ಕುಮಾರ್‌, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌, ಮಾಜಿ ತಾಪಂ ಸದಸ್ಯ ಈಶ್ವರ್‌, ಮಾಜಿ ಗ್ರಾಪಂ ಅಧ್ಯಕ್ಷ ರವಿಕುಮಾರ್‌,ಮಾಜಿ ಸದಸ್ಯ ಶಿವಲಿಂಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾ ಅಧಿಕಾರಿ ಹರಿಪ್ರಸಾದ್‌ ಮುಖಂಡ ಜಗದೀಶ್‌, ರಮೇಶ್‌, ಮಲ್ಲೇಶ್‌, ರಾಜಣ್ಣ, ರವಿ ಇದ್ದರು.

ರೈತರ ಮೇಲೆ ಹಿಡಿತ ಸಾಧಿಸುವ ಯತ್ನ

ಹಾಲು ಒಕ್ಕೂಟದ ವ್ಯವಸ್ಥೆ ದುರ್ಬಲಗೊಳಿಸಲು ಖಾಸಗಿ ವ್ಯಕ್ತಿಗಳು ಕ್ಷೀರ ಕ್ಷೇತ್ರದಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ. ಆರಂಭದಲ್ಲಿ ರೈತರಿಗೆ 1ರಿಂದ 2 ರೂ. ಹೆಚ್ಚು ಮಾಡಿ ರೈತರ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಮಾರುಕಟ್ಟೆಯನ್ನು ಖಾಸಗೀಕರಣ ಮಾಡಿರೈತರ ಜಮೀನು ಯಾರು ಬೇಕಾದರೂಕೊಳ್ಳುವಂತಾ ಕಾನೂನು ಜಾರಿಗೆ ತಂದು ಕಷ್ಟಪಟ್ಟು ದುಡಿಯುವ ರೈತರನ್ನು ಭವಿಷ್ಯದಲ್ಲಿ ಜೀತದಾಳುಗಳನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ರೈತರು ಎಚ್ಚರಿಕೆಯಿಂದ ಇರಬೇಕು ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss