ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..
ಹೊಸದಿಗಂತ ವರದಿ, ಮಂಗಳೂರು:
ತೌಕ್ತೆ ಚಂಡಮಾರುಕ್ಕೆ ಸಿಲುಕಿ ನಲುಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಪರಿಸ್ಥಿತಿ ಬಹುತೇಕ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಭಾರಿ ಹಾನಿ ಉಂಟಾಗಿದೆ.
ಭಾನುವಾರ ಮಳೆ ಇಳಿಮುಖಗೊಂಡಿದ್ದು, ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಕೆಲ ಕಾಲ ಬಿಸಿಲು ಕಾಣಿಸಿಕೊಂಡಿತ್ತು. ಸಮುದ್ರದ ಪ್ರಕ್ಷುಬ್ದತೆ ಮುಂದುವರೆದಿದ್ದು, ಅಲೆಗಳ ಅಬ್ಬರ ಭಾನುವಾರವೂ ಕಡಿಮೆ ಆಗಿಲ್ಲ.
ಚಂಡಮಾರುತದ ಪರಿಣಾಮ ಮಂಗಳೂರು ತಾಲೂಕಿನಲ್ಲಿ ಕಡಲು ಕೊರೆತ ಭಾನುವಾರವೂ ಮುಂದುವರೆದಿದೆ. ಕಡಲ ತೀರದ ರಸ್ತೆಗಳು ಸಂಪರ್ಕ ಕಡಿದುಕೊಂಡಿದ್ದು, ಅಲ್ಲಲ್ಲಿ ಸಮುದ್ರ ತೀರದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರ ಚಂಡಮಾರುತದ ಪರಿಣಾಮ ಅಲೆಗಳ ಅಬ್ಬರಕ್ಕೆ ಸೋಮೇಶ್ವರ, ಉಳ್ಳಾಲ, ಪಣಂಬೂರು, ಸಸಿಹಿತ್ಲುಗಳಲ್ಲಿ ಬೀಚ್ಗಳ ಸಂಪರ್ಕ ರಸ್ತೆ ಕಡಿದುಕೊಂಡಿದೆ. ಅಲೆಗಳು ಸಮುದ್ರ ತೀರದ ಸಂಪರ್ಕ ರಸ್ತೆ ದಾಟಿ ಬರುತ್ತಿದ್ದು, ರಸ್ತೆ ಸಮುದ್ರ ಪಾಲಾಗಿದೆ. ಸುರತ್ಕಲ್ ಲೈಟ್ಹೌಸ್ ಹಿಲ್ ಫಿಶರೀಸ್ ರಸ್ತೆ ಕಡಲಿನ ಒಡಲಿಗೆ ಸೇರಿದೆ. ಸೋಮೇಶ್ವರ ಫ್ಯಾಕ್ಟರಿ ರಸ್ತೆ, ಸಸಿಹಿತ್ಲು ಬೀಚ್ ರಸ್ತೆ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದೆ. ವಿವಿಧ ಬೀಚ್ ಸಂಪರ್ಕದ ಒಳರಸ್ತೆಗಳು ಅಲ್ಲಲ್ಲಿ ಪ್ರವಾಹಕ್ಕೆ ಕಡಿತಗೊಂಡಿವೆ ಎಂದು ಮೀನುಗಾರಿಕಾ ಮುಖಂಡರೊಬ್ಬರು ತಿಳಿಸಿದ್ದಾರೆ.