ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರೆದಿದ್ದು, ಬುಧವಾರವೂ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಜೂ.18ರವರೆಗೆ ಮಳೆ ಭಾರಿ ಬೀಳುವ ಸಾಧ್ಯತೆಯಿದ್ದು, ಜೂ.16ರಂದು ಬೆಳಗ್ಗೆಯಿಂದ 17ರಂದು ಬೆಳಗ್ಗೆವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿ ಕಳೆದ ಐದಾರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ನೇತ್ರಾವತಿ, ಕುಮಾರಧಾರ ಸಹಿತ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿವೆ. ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಧರ್ಮಸ್ಥಳದ ನೇತ್ರಾವತಿ ಹಾಗೂ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟದಲ್ಲಿ ಭಕ್ತರು ಸ್ನಾನಕ್ಕೆ ತೆರಳದಂತೆ ಎಚ್ಚರಿಕೆ ವಹಿಸಲಾಗಿದೆ.
ನಿರಂತರ ಮಳೆಗೆ ಜಿಲ್ಲೆಯ ಅಲ್ಲಲ್ಲಿ ಹಾನಿ ಸಂಭವಿಸಿದೆ. ಮರ ಹಾಗೂ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಬುಧವಾರ ಬೆಳಗ್ಗೆ ದೊರೆತ ಮಾಹಿತಿಯಂತೆ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಮುಲ್ಕಿ ತಾಲೂಕಿನಲ್ಲಿ ಮನೆಯೊಂದು ಸಂಪೂರ್ಣ ಕುಸಿದಿದ್ದು, ಅಪಾರ ಹಾನಿ ಸಂಭವಿಸಿದೆ. ಮಂಗಳೂರು ತಾಲೂಕಿನಲ್ಲಿ ಮೂರು, ಸುಳ್ಯ, ಮುಲ್ಕಿ ತಾಲೂಕಿನಲ್ಲಿ ತಲಾ ಎರಡು, ಪುತ್ತೂರು ತಾಲೂಕಿನಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ.
ಸಮುದ್ರತೀರದಲ್ಲಿ ಪ್ರತೀ ಗಂಟೆಗೆ 40ರಿಂದ 50ಕಿ.ಮೀ. ವೇಗದಲ್ಲಿ ಪ್ರಬಲ ಗಾಳಿ ಬೀಸಲಿದ್ದು, ಜು.16ರಂದು ಬೆಳಗ್ಗೆ 8.30ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.