ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲೈ ಲಾಮಾ ತಮ್ಮ ಮರಣದ ನಂತರವೂ ಬೌದ್ಧ ಸಂಸ್ಥೆ ಮುಂದುವರಿಯಲಿದೆ. ನನ್ನ ಉತ್ತರಾಧಿಕಾರಿಯನ್ನು ಈ ಸಂಸ್ಥೆ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಭಾರತದ ಧರ್ಮಶಾಲಾ ಪರ್ವತ ಪಟ್ಟಣದಿಂದ ಟಿಬೆಟಿಯನ್ ಭಾಷೆಯಲ್ಲಿ ಪ್ರಸಾರವಾದ ವೀಡಿಯೊದಲ್ಲಿ ದಲೈ ಲಾಮಾ ಚೀನಾಗೆ ಸವಾಲು ಹಾಕಿದ್ದಾರೆ.
ಸುಮಾರು 66 ವರ್ಷಗಳಿಂದ ಟಿಬೆಟಿಯನ್ ಸಮುದಾಯವನ್ನು ಧರ್ಮಶಾಲಾದಿಂದ ಮುನ್ನಡೆಸಲಾಗುತ್ತಿದೆ. 1959ರ ದಂಗೆಯ ಬಳಿಕ ಭಾರತದಲ್ಲಿ ಆಶ್ರಯ ಪಡೆದ ದಲೈ ಲಾಮಾ ಇದೀಗ ತಮ್ಮ ಉತ್ತರಾಧಿಕಾರ ಯೋಜನೆಗಳ ಬಗ್ಗೆ ಹೇಳಿದ್ದಾರೆ. ತಮ್ಮ ಆತ್ಮಚರಿತ್ರೆಯಾದ ‘ವಾಯ್ಸ್ ಫಾರ್ ದಿ ವಾಯ್ಸ್‌ಲೆಸ್’ನಲ್ಲಿ ಅವರು ತಮ್ಮ 90ನೇ ಹುಟ್ಟುಹಬ್ಬದ ವೇಳೆ ತಮ್ಮ ಉತ್ತರಾಧಿಕಾರಿ ಯಾರೆಂದು ಬಹಿರಂಗಪಡಿಸುವುದಾಗಿ ಸುಳಿವು ನೀಡಿದ್ದರು.
ದಲೈ ಲಾಮಾ ಅವರ 90ನೇ ಹುಟ್ಟುಹಬ್ಬದ ಆಚರಣೆಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಟಿಬೆಟಿಯನ್ನರು ಸಿದ್ಧತೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಹೊಸ ದಲೈ ಲಾಮಾ ಅವರ ಹೆಸರು ಘೋಷಣೆಯಾಗುವ ಸಾಧ್ಯತೆಯೂ ಇದೆ.
ಟಿಬೆಟಿಯನ್ ಸಂಪ್ರದಾಯಿಕ ನಂಬಿಕೆ ಪ್ರಕಾರ ಹಿರಿಯ ಬೌದ್ಧ ಸನ್ಯಾಸಿಯ ಆತ್ಮವು ಮರಣದ ಬಳಿಕ ಪುನರ್ಜನ್ಮ ಪಡೆಯುತ್ತದೆ. 1935ರ ಜುಲೈ 6ರಂದು ಈಶಾನ್ಯ ಟಿಬೆಟ್‌ನಲ್ಲಿರುವ ಕೃಷಿ ಕುಟುಂಬದಲ್ಲಿ ಜನಿಸಿದ ಲಾಮೋ ಧೋಂಡಪ್ ಎರಡೇ ವರ್ಷಕ್ಕೆ 13ನೇ ದಲೈ ಲಾಮಾ ಅವರಿಗೆ ಸೇರಿದ ಆಸ್ತಿಗಳನ್ನು ಸ್ಪಷ್ಟವಾಗಿ ಗುರುತಿಸಿದಾಗ ಇದೇ ಪುನರ್ಜನ್ಮ ಎಂದು ಟಿಬೆಟಿಯನ್ ಸರ್ಕಾರ ನೇಮಿಸಿದ ಶೋಧನಾ ತಂಡವು ದೃಢಪಡಿಸಿತು. ಅದಾದ ನಂತರ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಯಿತು.
ಇಂದು ತಾನು ಸತ್ತಾಗ ತನಗೆ ಉತ್ತರಾಧಿಕಾರಿ ಇರುತ್ತಾನೆ ಎಂದು ದೃಢಪಡಿಸಿದ್ದಾರೆ. ದಲೈ ಲಾಮಾ ಅವರ 600 ವರ್ಷಗಳ ಹಳೆಯ ಸಂಸ್ಥೆ ಮುಂದುವರಿಯುತ್ತದೆ ಎಂದು ಜಗತ್ತಿನಾದ್ಯಂತ ಬೌದ್ಧ ಅನುಯಾಯಿಗಳಿಗೆ ಅವರು ಭರವಸೆ ನೀಡಿದರು. ಇದು ಟಿಬೆಟಿಯನ್ನರಿಗೆ ಒಂದು ಮಹತ್ವದ ನಿರ್ಧಾರವಾಗಿದ್ದು, ಅವರಲ್ಲಿ ಅನೇಕರು ನಾಯಕನಿಲ್ಲದ ಭವಿಷ್ಯವನ್ನು ಯೋಚಿಸಿ ಹೆದರುತ್ತಿದ್ದರು. ಟಿಬೆಟಿಯನ್ನರ ಪ್ರಕಾರ, ಟೆನ್ಜಿನ್ ಗ್ಯಾಟ್ಸೊ ದಲೈ ಲಾಮಾ ಅವರ 14ನೇ ಪುನರ್ಜನ್ಮ.
ಚೀನಾ ದಲೈ ಲಾಮಾ ಅವರನ್ನು ಪ್ರತ್ಯೇಕತಾವಾದಿ ಮತ್ತು ಬಂಡಾಯಗಾರ ಎಂದು ನೋಡುತ್ತದೆ. ಟಿಬೆಟ್ ಸ್ವಾಯತ್ತ ಪ್ರದೇಶದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಚೀನಾ ದಲೈ ಲಾಮಾ ಅವರ ಉತ್ತರಾಧಿಕಾರಿಯನ್ನು ಹೆಸರಿಸುತ್ತದೆ ಎಂದು ದೇಶಭ್ರಷ್ಟರೆನಿಸಿಕೊಂಡಿರುವ ಟಿಬೆಟಿಯನ್ನರು ಭಯಪಡುತ್ತಾರೆ. ದಲೈ ಲಾಮಾ ಈ ಹಿಂದೆ ತಮ್ಮ ಉತ್ತರಾಧಿಕಾರಿ ಚೀನಾದ ಹೊರಗೆ ಜನಿಸುತ್ತಾರೆ ಎಂದು ಹೇಳಿದ್ದರು ಮತ್ತು ಬೀಜಿಂಗ್ ಆಯ್ಕೆ ಮಾಡಿದ ಯಾರನ್ನೇ ಆದರೂ ತಿರಸ್ಕರಿಸುವಂತೆ ಅನುಯಾಯಿಗಳನ್ನು ಒತ್ತಾಯಿಸಿದ್ದರು. ಇದೀಗ ಮತ್ತೆ ದಲೈ ಲಾಮಾ ಚೀನಾಗೆ ಸವಾಲೆಸೆದಿದ್ದಾರೆ.