ಅತಿವೃಷ್ಟಿಯಿಂದ ಜೋಳದ ಬೆಳೆಗೆ ಹಾನಿ: ಪರಿಹಾರಕ್ಕೆ ಆಗ್ರಹ

ಹೊಸದಿಗಂತ ವರದಿ ಕುಶಾಲನಗರ:
ಜಿಲ್ಲೆಯಲ್ಲಿ ಜುಲೈ ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುಸುಕಿನ ಜೋಳದ ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ನಷ್ಟ ಅನುಭವಿಸುತ್ತಿರುವವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಾಗಿ ಮಳೆ ಅಧಾರಿತವಾಗಿ ಮುಸುಕಿನ ಜೋಳವನ್ನು ಬೆಳೆಯಲಾಗುತ್ತಿದ್ದು, ಈ ಬಾರಿ ಜುಲೈ ತಿಂಗಳಿನಿಂದ ಇಲ್ಲಿಯವರೆಗೆ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕಿನ 7 ಗ್ರಾಮ ಪಂಚಾಯತಿ ವ್ಯಾಪ್ತಿಯ 50ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಈ ಬಾರಿ ಜೋಳದ ಬೆಳೆಯ ಬೆಳವಣಿಗೆಯಲ್ಲಿ ಕುಂಠಿತವಾಗಿದೆ.
ಕುಶಾಲನಗರ ತಾಲೂಕು ವ್ಯಾಪ್ತಿಯ ಹೆಬ್ಬಾಲೆ, ಶಿರಂಗಾಲ, ತೊರೆನೂರು, ಸಿದ್ದಲಿಂಗಪುರ ಚಿಕ್ಕತ್ತೂರು, ದೊಡ್ಡತ್ತೂರು, ದೊಡ್ಡಅಳುವಾರ, 6ನೇ ಹೊಸಕೋಟೆ, ಜೇನುಕಲ್ಲುಬೆಟ್ಟ ಸೀಗೆಹೊಸೂರು ಸೇರಿದಂತೆ ಅನೇಕ ಗ್ರಾಮಗಳು ಅರೆ ಮಲೆನಾಡು ಪ್ರದೇಶವಾಗಿದ್ದು ಈ ಭಾಗದ ಜಮೀನಿನಲ್ಲಿ ಜೋಳದ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಈ ಸಾಲಿನಲ್ಲಿ ಜಮೀನಿನ ಉಳುಮೆ ಸಂದರ್ಭದಲ್ಲಿ ಹದವಾದ ಮಳೆ ಬಿದ್ದಿದ್ದರೂ, ನಂತರದ ದಿನಗಳಲ್ಲಿ ಭಾರಿ ಮಳೆಯಿಂದಾಗಿ ಜೋಳದ ಬೆಳೆಗೆ ಎರಡು ತಿಂಗಳು ಕಳೆಯುತ್ತಾ ಬಂದರೂ ಬೆಳೆ ಮಾತ್ರ ಎರಡು ಅಡಿಗಳ ಎತ್ತರಕ್ಕೆ ಮಾತ್ರ ಬೆಳೆದಿದೆ.
ಈಗಾಗಲೇ ಜೋಳದ ಬೆಳೆ ಹೂ ಬಿಡಲಾರಂಭಿಸಿದ್ದರೂ, ಮಳೆಯಿಂದಾಗಿ ಉತ್ತಮವಾಗಿ ಕಾಳು ಕಟ್ಟುತ್ತಿಲ್ಲ. ಇದರಿಂದಾಗಿ ಈ ವ್ಯಾಪ್ತಿಯ ಅನೇಕ ರೈತರು ಸಂಕಷ್ಟ ಎದುರಿಸುವಂತಾಗಿದ್ದು, ಸಂಬಂಧಿಸಿದ ಇಲಾಖೆಯವರು ಸ್ಧಳ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತಾಗಬೇಕು ಎಂದು ಈ ವ್ಯಾಪ್ತಿಯ ನೂರಾರು ರೈತರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!