ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿಕಾಸಸೌಧದಲ್ಲಿ ಕೃಷಿ ರಾಯಭಾರಿಯಾಗಿ ನಟ ದರ್ಶನ್ ಅಧಿಕಾರ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಸಿರು ಶಾಲು ಹೊದಿಸಿ, ಮೈಸೂರು ಪೇಟಾ, ನೇಗಿಲು ಕೊಟ್ಟು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸನ್ಮಾನ ಮಾಡಿದ್ದಾರೆ. ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಸಮ್ಮುಖದಲ್ಲಿ ನಟ ದರ್ಶನ್ ನೂತನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
“ಕೃಷಿ ಕಾಯಕದ ರಾಯಭಾರಿ”ಯಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ,ದರ್ಶನ್ ಅವರಿಗೆ ರೈತರ ಪರವಾಗಿ ಅಭಿನಂದನೆಗಳು. ಚಲನಚಿತ್ರ ರಂಗದಲ್ಲಿ ಎತ್ತರಕ್ಕೆ ಬೆಳೆದಿರುವ ಅವರು ನಟನೆಯ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.
ದರ್ಶನ್ ಅವರಿಗೆ ರೈತರ ಪರವಾಗಿ ಅಭಿನಂದನೆಗಳು. ಕೃಷಿ ಇಲಾಖೆಗೆ ಕೃಷಿ ರಂಗಕ್ಕೆ ದರ್ಶನ್ ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಮೆಚ್ಚುಗೆಯ ಸಂಗತಿ. ಕೃಷಿ ಸಚಿವ ಬಿ.ಸಿ.ಪಾಟೀಲ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾನು ಸಹ ದರ್ಶನ್ ಅವರ ‘ರಾಬರ್ಟ್’ಚಿತ್ರವನ್ನು ನೋಡುತ್ತೇನೆ ಎಂದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಇದು ಕೃಷಿ ಇಲಾಖೆಯ ಅಭೂತಪೂರ್ವ ಕಾರ್ಯಕ್ರಮವಾಗಿದೆ. ಚಾಲೆಂಜಿಂಗ್ ಸ್ಟಾರ್ ಚಿತ್ರರಂಗದಲ್ಲಿ ನಟನೆಯ ಜೊತೆಗೆ ಕೃಷಿ ಪಶುಸಂಗೋಪನೆ ಚಟುವಟಿಕೆಗಳನ್ನೂ ನಡೆಸುತ್ತಿರುವ ದರ್ಶನ್ ಕೃಷಿ ಕಾಯಕದ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ ಎಂದರು.
ದರ್ಶನ್ ಎತ್ತರವಿರುವಷ್ಟು ಅವರ ಹೃದಯವೂ ಅಷ್ಟೇ ವಿಶಾಲವಾಗಿದೆ. ದರ್ಶನ್ ಫಾರ್ಮ್ ಎನ್ನುವುದು ಸಣ್ಣ ಮೃಗಾಲಯವಿದ್ದಂತೆ ಇದೆ. ದರ್ಶನ್ ಸ್ವತಃ ಕೃಷಿ ಚಟುವಟಿಕೆಯನ್ನೂ ಮಾಡುತ್ತಾರೆ. ದರ್ಶನ್ ಸ್ವತಃ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದಿರುವುದು ಖುಷಿಯ ವಿಚಾರ. ದೊಡ್ಡದೊಡ್ಡ ಕೆಲ ಸೂಪರ್ ಸ್ಟಾರ್ಗಳು ಸಂಭಾವನೆ ಪಡೆದು ದೊಡ್ಡದೊಡ್ಡ ಕಂಪೆನಿ ಕಾರ್ಯಕ್ರಮಗಳಿಗೆ ರಾಯಭಾರಿಯಾಗುತ್ತಾರೆ. ಆದರೆ ದರ್ಶನ್ ಕೃಷಿ ಇಲಾಖೆಗೆ ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಿರುವುದು ದರ್ಶನ್ ಅವರಲ್ಲಿರುವ ಕೃಷಿ ಉತ್ಸಾಹ ರೈತ ಪರ ಕಾಳಜಿಯನ್ನು ತೋರಿಸುತ್ತದೆ ಎಂದರು.
ದರ್ಶನ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಸಿನಿಮಾರಂಗದಿಂದ ಈಗ ಬಿ.ಸಿ.ಪಾಟೀಲ್ ಕೃಷಿ ಸಚಿವರಾಗಿದ್ದಾರೆ. ನಾನು ಸರ್ಕಾರದ ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಪ್ರಚುರ ಪಡಿಸುತ್ತೇನೆ. ರೈತರಿಗೂ ಜನರಿಗೂ ಇರುವುದು ರಕ್ತ ಸಂಬಂಧ. ಇದಕ್ಕೆ ನಾನು ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ನಿರ್ದೇಶಕ ಶ್ರೀನಿವಾಸ್, ಮೇಲ್ಮನೆ ಸದಸ್ಯ ಸಂದೇಶ್ ನಾಗರಾಜ್, ಸೇರಿದಂತೆ ಕೃಷಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.