Monday, September 25, 2023

Latest Posts

ಕುಶಾಲನಗರದಲ್ಲಿ ದಾಸೋಹ ದಿನಾಚರಣೆ

ಹೊಸದಿಗಂತ ವರದಿ,ಕುಶಾಲನಗರ :

ನಡೆದಾಡಿದ ದೇವರು, ತ್ರಿವಿಧ ದಾಸೋಹಿ, ಕಾಯಕಯೋಗಿ, ಪದ್ಮಭೂಷಣ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಸ್ಮರಣೆಯನ್ನು ಕುಶಾಲನಗರ ವ್ಯಾಪ್ತಿಯಲ್ಲಿ ದಾಸೋಹ ದಿನವಾಗಿ ಆಚರಿಸಲಾಯಿತು.
ವೀರಶೈವ ಲಿಂಗಾಯತ ಯುವ ವೇದಿಕೆ ಆಶ್ರಯದಲ್ಲಿ ಶಿರಂಗಾಲದಿಂದ ಕುಶಾಲನಗರ ತನಕ ಶ್ರೀ ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರವಿರುವ ಬೆಳ್ಳಿ ರಥದ ಮೆರವಣಿಗೆ ಹಾಗೂ ದಾಸೋಹ, ವೀರಗಾಸೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಸ್ವಾಮೀಜಿಗಳ ಸ್ಮರಣೆ ಮಾಡಲಾಯಿತು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ಶಿರಂಗಾಲ ಷಡಕ್ಷರ ಮತ್ತು ಮರೂರು ಭರತ್ ಅವರ ಮುಂದಾಳತ್ವದಲ್ಲಿ ಶಿರಂಗಾಲದಿಂದ ಕುಶಾಲನಗರ ಮೂಲಕ ಗುಡ್ಡೆಹೊಸೂರುವರೆಗೆ ಮೆರವಣಿಗೆ ತೆರಳಿ ಸುಮಾರು 5000ಕ್ಕೂ ಅಧಿಕ ಜನರಿಗೆ ದಾಸೋಹ ನೆರವೇರಿಸಲಾಯಿತು.
ಬೆಳಗ್ಗೆ ಶಿರಂಗಾಲದ ಶ್ರೀ ಮಂಟಿಗಮ್ಮ ತಾಯಿ ಗದ್ದುಗೆಯಿಂದ ಹೊರಟ ಶ್ರೀಗಳ ಭಾವಚಿತ್ರವಿರುವ ಬೆಳ್ಳಿರಥ ತೊರೆನೂರು, ಹೆಬ್ಬಾಲೆ, ಕೂಡಿಗೆ, ಕುಶಾಲನಗರ ಮಾರ್ಗವಾಗಿ ಜಿಲ್ಲೆಯ ಗಡಿ ಭಾಗದ ಕಾವೇರಿ ಪ್ರತಿಮೆ ತನಕ ತೆರಳಿ ಅಲ್ಲಿ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ನಂತರ ಕುಶಾಲನಗರ ಪಟ್ಟಣ ಮೂಲಕ ಗುಡ್ಡೆಹೊಸೂರು ತನಕ ರಥ ತೆರಳಿತು.
ಈ ಸಂದರ್ಭ ದಾರಿ ಮಧ್ಯೆ ಇರುವ ಎಲ್ಲಾ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವೇದಿಕೆ ವತಿಯಿಂದ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ಮಾತನಾಡಿದ ಶ್ರೀ ಸದಾಶಿವ ಸ್ವಾಮೀಜಿ, ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿ ಮೂರು ವರ್ಷಗಳು ಸಂದಿದ್ದು ಶ್ರೀಗಳ ಸ್ಮರಣಾರ್ಥವಾಗಿ ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಕುಶಾಲನಗರ ರಥಬೀದಿಯ ಬಸವೇಶ್ವರ ದೇವಾಲಯದಲ್ಲಿ ಕೊಡಗು ಜಿಲ್ಲಾ ವೀರಶೈವ ಜಿಲ್ಲಾಧ್ಯಕ್ಷ ಹೆಚ್.ವಿ ಶಿವಪ್ಪ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ರಥವನ್ನು ಬರಮಾಡಿಕೊಂಡು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಥದ ಮೆರವಣಿಗೆ ನಡುವೆ ವೀರಗಾಸೆ ಕುಣಿತ ನಡೆಯಿತು.
ಈ ಸಂದರ್ಭ ವೇದಿಕೆಯ ಜಿಲ್ಲಾ ಮತ್ತು ತಾಲೂಕು ಘಟಕದ ಪ್ರಮುಖರಾದ ಕೆ.ಡಿ ಪ್ರಶಾಂತ್, ನವೀನ್ ಕುಮಾರ್, ಚಿತ್ರ ಕುಮಾರ್, ಚೇತನ್, ಆದರ್ಶ್, ಶ್ರೀಕಾಂತ್ ಸೇರಿದಂತೆ ವೇದಿಕೆಯ ಪ್ರಮುಖರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!