ಭಾರತ್‌ಪೇ ನಲ್ಲಿ ಡೇಟಾ ಕಳ್ಳತನ? : ಮಾಜಿ ಸಿಇಒ ಅಶ್ನೀರ್‌ ಗ್ರೋವರ್‌ ಹೇಳಿದ್ದೇನು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಾದ್ಯಂತ ಆನ್‌ಲೈನ್‌ ಪಾವತಿ ವೇದಿಕೆಯಾಗಿ ಬಳಕೆಯಾಗುತ್ತಿರೋ ಭಾರತ್‌ಪೇ ದಲ್ಲಿ ಬಳಕೆದಾರರ ಡೇಟಾ ಕಳ್ಳತನವಾಗಿದೆ ಎಂದು ಕೆಲತಿಂಗಳ ಹಿಂದಷ್ಟೇ ಕಂಪನಿ ತೊರೆದಿರುವ ಮಾಜಿ ಸಿಇಒ ಅಶ್ನೀರ್‌ ಗ್ರೋವರ್‌ ಆರೋಪಿಸಿದ್ದಾರೆ.

ಭಾರತ್‌ ಪೇ ಮಾಜಿ ಸಿಇಒ ಅಶ್ನೀರ್‌ಗ್ರೋವರ್‌ ಹಾಗು ಭಾರತ್‌ ಪೇ ನಡುವೆ ತಿಕ್ಕಾಟಗಳು ನಡೆಯುತ್ತಿದೆ. ಇದೀಗ ಈ ತಿಕ್ಕಾಟಕ್ಕೆ ಹೊಸ ತಿರುವು ಸಿಕ್ಕಿದ್ದು ಡೇಟಾ ಉಲ್ಲಂಘನೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಗ್ರೋವರ್‌ ಎನ್‌ಪಿಸಿಐಗೆ (NPCI) ಪತ್ರ ಬರೆದಿದ್ದಾರೆ. ಪ್ರಸ್ತುತ ಭಾರತ್‌ ಪೇ ನ ಸಿಇಒ ಆಗಿ ಅಧಿಕಾರದಲ್ಲಿರೋ ಭಾವಿಕ್ ಕೊಲಾಡಿಯಾ ವಿರುದ್ಧ ಗ್ರೋವರ್ ಈ ಆರೋಪಗಳನ್ನು ಮಾಡಿದ್ದು ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಅಪ್ಲಿಕೇಶನ್‌ನ ಸುಮಾರು 150 ಮಿಲಿಯನ್ ಬಳಕೆದಾರರ ವಿವರಗಳನ್ನು ಕದಿಯಲಾಗಿದೆ ಎಂದು ಗ್ರೋವರ್‌ ಹೇಳಿದ್ದಾರೆ.

ಕೊಲಾಡಿಯಾ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಸುಮಾರು 150 ಮಿಲಿಯನ್ ಬಳಕೆದಾರರ ವಿವರಗಳನ್ನೊಳಗೊಂಡ ಭಾರತದ ಅತಿ ದೊಡ್ಡ ಡೇಟಾ ಕಳ್ಳತನ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಭಾರತ್‌ ಪೇ ಈ ಆರೋಪಗಳನ್ನು ತಳ್ಳಿಹಾಕಿದೆ.

“ಈ ಹಿಂದೆ ಭಾವಿಕ್ ಅವರು ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣದಲ್ಲಿ ಯುಎಸ್‌ನಲ್ಲಿ ಶಿಕ್ಷೆಗೊಳಗಾದರು, ಅಲ್ಲಿ ಅವರನ್ನು 18 ತಿಂಗಳ ಕಾಲ ಗೃಹಬಂಧನದಲ್ಲಿಟ್ಟು ನಂತರ ಭಾರತಕ್ಕೆ ಗಡೀಪಾರು ಮಾಡಲಾಯಿತು. ಭಾರತದಲ್ಲಿ, ಅವರು ನಕಲಿ ಟಿಕೆಟ್‌ನಲ್ಲಿ ಗುಜರಾತ್‌ಗೆ ಪ್ರಯಾಣಿಸಲು ಪ್ರಯತ್ನಿಸಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರಿಗೆ ಭಾರತ್‌ ಪೇಯಲ್ಲಿ ಮತ್ತೊಮ್ಮೆ ಅವಕಾಶ ನೀಡಿರುವುದು ಒಂದು ದೊಡ್ಡ ತಪ್ಪು. ಇದು ಭಾರತದಲ್ಲೇ ಅತಿದೊಡ್ಡ ಡೇಟಾ ಕಳ್ಳತನಕ್ಕೆ ಕಾರಣವಾಗಿದೆ” ಎಂದು ಗ್ರೋವರ್‌ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯೆಸ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳೊಂದಿಗಿನ API ಗಳನ್ನು ಬಳಸಿಕೊಂಡು BharatPe ನಲ್ಲಿ ಬಳಕೆದಾರರ ವಹಿವಾಟಿನ ಡೇಟಾವನ್ನು ಪಡೆಯಲಾಗಿದೆ ಎಂದು ಗ್ರೋವರ್ ಆರೋಪಿಸಿದ್ದಾರೆ.

ಗ್ರೋವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತ್‌ಪೇ ಅವರ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ದುರುದ್ದೇಶಪೂರಿತವಾಗಿವೆ ಎಂದು ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!