Monday, July 4, 2022

Latest Posts

ದತ್ತ ಜಯಂತಿ: ಚಿಕ್ಕಮಗಳೂರಿನಲ್ಲಿ ಮಹಿಳೆಯರಿಂದ ಬೃಹತ್ ಸಂಕೀರ್ತನಾ ಯಾತ್ರೆ

ಹೊಸದಿಗಂತ ವರದಿ,ಚಿಕ್ಕಮಗಳೂರು:

ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ಹಮ್ಮಿಕೊಳ್ಳಲಾಗಿರುವ ದತ್ತ ಜಯಂತಿ ಅಂಗವಾಗಿ ಶುಕ್ರವಾರ ಅನಸೂಯ ಮಾತೆ ಪೂಜೆ ಹಾಗೂ ಮಹಿಳೆಯರಿಂದ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಿತು.
ಕೇಸರಿ ಶಾಲು, ರುಮಾಲು ಧರಿಸಿ ಭಗವಾಧ್ವಜಗಳನ್ನು ಹಿಡಿದ ಮಹಿಳೆಯರು ದತ್ತಾತ್ರೇಯರ ಪರ ಘೋಷಣೆಗಳನ್ನು ಕೂಗುತ್ತ ದೇವರ ಸಂಕೀರ್ತನೆ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದರು.
ಬೆಳಗ್ಗೆ ಬೋಳರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ದತ್ತಾತ್ರೇಯರ ಭಾವಚಿತ್ರವನ್ನು ಹಿಡಿದು ದೇವಸ್ಥಾನದ ಆವರಣದಲ್ಲೇ ಭಜನೆ ನಡೆಸಿದರು.
೨ ಸಾವಿರಕ್ಕೂ ಹೆಚ್ಚಿದ್ದ ಮಹಿಳೆಯರು ಐಜಿ ರಸ್ತೆ, ಆರ್.ಜಿರಸ್ತೆ ಮೂಲಕ ಕಾಮಧೇನು ಗಣಪತಿ ದೇವಸ್ಥಾದ ವರೆಗೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಖಾಸಗಿ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದರು.
ವಿಶ್ವಹಿಂದೂ ಪರಿಷತ್ ಅಖಿಲ ಭಾರತೀಯ ಉಪಾಧ್ಯಕ್ಷರಾದ ಡಾ.ವಿಜಯಲಕ್ಷ್ಮಿ ದೇವಮಾನೆ, ಜಿ.ಪಂ.ಮಾಜಿ ಸದಸದಸ್ಯರುಗಳಾದ ಜಸಿಂತ ಅನಿಲ್ ಕುಮಾರ್, ಕವಿತಾ ಲಿಂಗರಾಜು, ತಾ.ಪಂ. ಮಾಜಿ ಅಧ್ಯಕ್ಷರು, ಸದಸ್ಯರುಗಳಾದ ರೇಖಾ ಅನಿಲ್, ವಿಶಾಖ, ಭವ್ಯ ನಟೇಶ್, ಸುವರ್ಣ ಕೇಶವಮೂರ್ತಿ ಇತರರು ಭಾಗವಹಿಸಿದ್ದರು.
ಸಿ.ಟಿ.ರವಿ ಭಾಗಿ
ಶಾಸಕರೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ಸಿ.ಟಿ.ರವಿ ಸಂಕೀರ್ತನಾ ಯಾತ್ರೆಯಲ್ಲಿ ಭಾಗವಹಿಸಿ ಮಹಿಳಾ ಭಕ್ತರೊಂದಿಗೆ ಹೆಜ್ಜೆ ಹಾಕಿದರು. ಅವರೂ ಸಹ ದೇವರ ನಾಮಗಳನ್ನು ಹಾಡಿದರು
ಅವರೊಂದಿಗೆ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಬಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಬಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್ ಹೆರೂರು, ಸಹ ಸಂಚಾಲಕ ಅಮಿತ್ ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು, ಬಿಜೆಪಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.
ಪೀಠದಲ್ಲಿ ಅನಸೂಯಾ ಪೂಜೆ
ನಗರದಲ್ಲಿ ಸಂಕೀರ್ತನಾ ಯಾತ್ರೆ ಮುಗಿಸಿದ ನಂತರ ದತ್ತಪೀಠಕ್ಕೆ ತೆರಳಿದ ಮಹಿಳೆಯರು ಬ್ಯಾರಿಕೇಡ್ ಮೂಲಕ ಸರತಿಯಲ್ಲಿ ತೆರಳಿ ದತ್ತಗುಹೆಯಲ್ಲಿನ ಅನಸೂಯಾ ದೇವಿ ಗದ್ದೆಗೆ ನಮಿಸಿ, ದತ್ತ ಪಾದುಕೆಗಳ ದರ್ಶನ ಪಡೆದರು.
ನಂತರ ಪೀಠದ ಆವರಣದಲ್ಲಿ ನಡೆದ ಅನಸೂಯಾ ದೇವಿ ಪೂಜೆ, ಗಣ ಹೋಮ, ದತ್ತ ಹೋಮಗಳಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರಲ್ಲದೆ, ಪ್ರಸಾದ ಸೇವಿಸಿ ಹಿಂತಿರುಗಿದರು. ಪಲ್ಲವಿ ಸಿ.ಟಿ.ರವಿ ಅವರೂ ಪೀಠಕ್ಕೆ ತೆರಳಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಅರಿಸಿನ, ಕುಂಕುಮ ವಿತರಣೆ
ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿಯೂ ಪೀಠಕ್ಕೆ ಭೇಟಿ ನೀಡಿದ್ದ ಮಹಿಳೆಯರಿಗೆ ಅರಿಸಿನ, ಕುಂಕುಮ ಹಾಗೂ ಬಳೆಗಳನ್ನು ವಿತರಿಸಲಾಯಿತು.
ಕಾರ್ಕಳ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರ ತಂಡ ಹೊನ್ನಮ್ಮನಹಳ್ಳದಿಂದಲೇ ಕಾಲ್ನಡಿಗೆಯಲ್ಲಿ ಪೀಠಕ್ಕೆ ತೆರಳಿದರು. ದಾರಿಯುದ್ಧಕ್ಕೂ ದೇವರ ಭಜನೆ ಮಾಡಿದರು.
ಕೊರೋನಾ ಭೀತಿ
ಈ ಬಾರಿ ಓಮಿಕ್ರಾನ್, ಕೊರೋನಾ ಭೀತಿಯಿಂದಾಗಿ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ಭಕ್ತರ ಸಂಖ್ಯೆ ಕಡಿಮೆ ಇದೆ ಎಂದು ಜಿ.ಪಂ.ಮಾಜಿ ಸದಸ್ಯೆ ಕವಿತಾ ಲಿಂಗರಾಜು ಹೇಳಿದರು. ಬಹಳಷ್ಟು ಮಂದಿ ದೂರವಾಣಿಯಲ್ಲಿ ಮಾತನಾಡಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ ಎಂದರು.
ನಾಳೆ ಭಿಕ್ಷಾಟನೆ
ಮಾತಾ ಅನುಸೂಯ ಪೂಜೆಯೊಂದಿಗೆ ದತ್ತ ಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿದೆ. ಭಿಕ್ಷಾಟನೆ ಮಾಡಿ ಪಡಿ ಸಂಗ್ರಹ ಹಾಗೂ ಮಧ್ಯಾಹ್ನ ಶೋಭಾಯಾತ್ರೆ ನಡೆಯಲಿದೆ. ಭಾನುವಾರ ಪೀಠದಲ್ಲಿ ದತ್ತ ಜಯಂತಿ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss