ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗಳು ತನ್ನ ಅಪ್ಪ- ಅಮ್ಮ ದೂರ ದೂರವಿದ್ದ ಸಂದರ್ಭ ಅಪ್ಪನ ಜತೆ ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸದಿದ್ದರೆ, ಆಕೆ ತನ್ನ ಶಿಕ್ಷಣಕ್ಕೆ ಮತ್ತು ಮದುವೆಗಾಗಿ ತನ್ನ ತಂದೆಯಿಂದ ಹಣ ಪಡೆಯಲು ಅರ್ಹಳಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಮಗಳು ತನ್ನ ಜೀವನವನ್ನುತನಗೆ ಬೇಕಾದ ರೀತಿಯಲ್ಲಿ ನಡೆಸಿಕೊಂಡು ಹೋಗಲು ಸ್ವತಂತ್ರಳು. ಹಾಗಾಗಿ ಆಕೆ ತಂದೆಯಿಂದ ಶಿಕ್ಷಣ ಮತ್ತು ಮದುವೆಗೆ ಹಣ ನೀಡುವಂತೆ ಕೇಳಲು ಅರ್ಹಳಲ್ಲ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಅವರನ್ನು ಒಳಗೊಂಡ ಪೀಠವು ಈ ಆದೇಶವನ್ನು ಹೊರಡಿಸಿದೆ.
ತಾಯಿಯು ಮಗಳನ್ನು ನೋಡಿಕೊಳ್ಳಲು ಬಯಸಿದರೆ, ಆಕೆಗೆ ಸಿಗುವ ಪರಿಹಾರದ ಮೊತ್ತವನ್ನು ನಿರ್ಧರಿಸುವ ಸಂದರ್ಭದಲ್ಲಿ ಮಗಳನ್ನು ಗಮನದಲ್ಲಿ ಇಟ್ಟುಕೊಂಡು ಕೋರ್ಟ್ಗಳು ಈ ಹಣವನ್ನು ನಿರ್ಧಾರ ಮಾಡಬಹುದೇ ವಿನಾ, ಮಗಳು ತನ್ನ ವೆಚ್ಚವನ್ನು ತಂದೆಯಿಂದ ಕೇಳಲು ಅರ್ಹಳಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಪಂಜಾಬ್ನ ವ್ಯಕ್ತಿಯೊಬ್ಬರು ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಅದನ್ನು ಕೌಟುಂಬಿಕ ಕೋರ್ಟ್ ಮಾನ್ಯ ಮಾಡಿತ್ತು. ಈ ಆದೇಶವನ್ನು ಪತ್ನಿ ಪಂಜಾಬ್-ಹರಿಯಾಣ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ವಿಚ್ಛೇದನ ಆದೇಶವನ್ನು ಹೈಕೋರ್ಟ್ ವಜಾ ಮಾಡಿತ್ತು. ಬಳಿಕ ಪತಿ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಸುಪ್ರೀಂಕೋರ್ಟ್ನಲ್ಲಿ ದಂಪತಿಗೆ ರಾಜಿ ಸಂಧಾನ ಮಾಡಲು ಪ್ರಯತ್ನಿಸಲಾಯಿತು ಅಮ್ಮನ ಜತೆಯೇ ಇದ್ದ 20 ವರ್ಷದ ಮಗಳಿಗೂ ಕೌನ್ಸೆಲಿಂಗ್ ನಡೆಸಲಾಯಿತು. ಆದರೆ ದಂಪತಿ ಒಟ್ಟಾಗಿ ಇರುವುದು ಸಾಧ್ಯವೇ ಇಲ್ಲ ಎಂದರೆ, ಮಗಳು ಕೂಡ ಅಪ್ಪನ ಜತೆ ತಾನು ಹೋಗುವುದಿಲ್ಲ ಎಂದಳು. ಈ ವೇಳೆ ಆದರೆ ಆಕೆಯ ಖರ್ಚನ್ನು ಭರಿಸುವಂತೆ ಪತ್ನಿ ಕೋರಿಕೊಂಡಿದ್ದರು.
ಇದರ ವಿಚಾರಣೆ ನಡೆಸಿದ ಕೋರ್ಟ್, ಪತ್ನಿಗೆ ಕಾನೂನಿನ ಅನ್ವಯ ನೀಡಬಹುದಾದ ಪರಿಹಾರದ ಮೊತ್ತ ನೀಡಬಹುದು. ಆದರೆ ಮಗಳು ತಂದೆಯ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳಲು ಬಯಸದ ಹಿನ್ನೆಲೆಯಲ್ಲಿ ಆಕೆಯ ಶಿಕ್ಷಣವಾಗಲಿ, ಮದುವೆಯ ಬಗ್ಗೆ ಅವಳು ಹಣವನ್ನು ತಂದೆಯಿಂದ ಕೇಳಲು ಅರ್ಹಳಲ್ಲ ಎಂದು ಹೇಳಿದೆ.
ಪತ್ನಿಗೆ 10 ಲಕ್ಷ ರೂಪಾಯಿ ಪರಿಹಾರ ಹಾಗೂ ಮಾಸಿಕವಾಗಿ ಎಂಟು ಸಾವಿರ ರೂಪಾಯಿಗಳನ್ನು ನೀಡುವಂತೆ ಕೋರ್ಟ್ ಆದೇಶಿಸಿದೆ.