ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿರುವ ಮೈ ಇಎ ಎಲೆಕ್ನಿಕ್ ಬೈಕ್ ಶೋ ರೂಮ್‌ನಲ್ಲಿ ಮಂಗಳವಾರ ಸಂಜೆ 5.30 ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಕೆನ್ನಾಲಿಗೆಗೆ ಯುವತಿಯೊಬ್ಬಳು ಸಜೀವ ದಹನವಾಗಿದ್ದಾಳೆ.
ಸೇಲ್ಸ್ ಗರ್ಲ್ ಮತ್ತು ರಿಸಪ್ಪನಿಸ್ಟ್ ಆಗಿದ್ದ ಪ್ರಿಯಾ(20) ಭೀಕರ ಅಗ್ನಿಜ್ವಾಲೆಯಲ್ಲಿ ಆಹುತಿಯಾಗಿದ್ದಾಳೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರ ತೆಗೆದಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಪ್ರಿಯಾ ಸಿಲುಕಿಕೊಂಡು ಹೊರಬರಲಾರದೆ ಸಾವನ್ನಪ್ಪಿದ್ದಾಳೆ. ಸದ್ಯ ಆಕೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಶೋ ರೂಮ್‌ನಲ್ಲಿ ನೋಡ ನೋಡುತ್ತಲೇ ಬೆಂಕಿ ಧಗಧಗನೇ ಹೊತ್ತಿ ಉರಿದಿದೆ. ಅಲ್ಲಿದ್ದ ಎಲೆಕ್ನಿಕ್ ಬೈಕ್‌ಗಳು ಸುಟ್ಟುಕರಕಲಾಗಿದೆ. ಈ ವೇಳೆ ಶೋ ರೂಮ್‌ನಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ 4 ಅಗ್ನಿಶಾಮಕ ವಾಹನಗಳು ಬಂದಿದ್ದು, ಸುಮಾರು ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವಘಡದಿಂದ ಡಾ.ರಾಜ್ ಕುಮಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆ, ರಾಜಾಜಿನಗರ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿಯಿತು. ಅಷ್ಟರಲ್ಲಿ ಪೊಲೀಸರು ವಾಹನ ಸವಾರರನ್ನು ಮುಂದಕ್ಕೆ ಕಳುಹಿಸಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿದರು.
ಎಲೆಕ್ನಿಕ್ ಬೈಕ್ ಶೋ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ ಶೋ ರೂಮ್ ನಲ್ಲಿ ವಿದ್ಯುತ್ ಶಾರ್ಟ್ ಸೆರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿನ ತನಿಖೆಯಿಂದ ತಿಳಿದು ಬರಬೇಕಿದೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆ ಮಗಳ ಹುಟ್ಟುಹಬ್ಬ
ಮುಗಿಲೆದ್ದ ಯುವತಿ ತಂದೆಯ ಆಕ್ರಂದನ ತನ್ನ ಮಗಳು ಬೆಂಕಿಗಾಹುತಿಯಾದ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾ ತಂದೆ ಆರ್ಮುಗಂ, ನ.20ರಂದು ನನ್ನ ಮಗಳ ಹುಟ್ಟುಹಬ್ಬ ಬಟ್ಟೆ ತರಿಸಿಟ್ಟಿದ್ದೇನೆ ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹೋಗಿದ್ದಳು ಪ್ರತಿ ದಿನ 7.30 ರೊಳಗೆ ಮನೆಯಲ್ಲಿರುತ್ತಿದ್ದಳು. ನನ್ನ ಮಗಳು ಇದೇ ಶೋ ರೂಮ್ ನಲ್ಲಿ ಕಳೆದ 3 ವರ್ಷಗಳಿಂದ ಕೆಲಸ ಮಾಡುತ್ತಿದ್ದಾಳೆ. ನನ್ನ ಸ್ನೇಹಿತ ಶೋ ರೂಮ್ ಬಳಿ ಬರಲು ತಿಳಿಸಿದ್ದ. ಬಂದಾಗಲೇ ವಿಷಯ ಗೊತ್ತಾಗಿದೆ. ನನ್ನ ಮಗಳು ಎಲ್ಲಿದ್ದಾಳೆ ಎಂದು ಕಣ್ಣೀರಿಟ್ಟಿದ್ದಾರೆ.
ಎಲೆಕ್ನಿಕ್ ಬೈಕ್ ಶೋ ರೂಮ್ನಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮಗಳು ಕಂಡುಬಂದಿಲ್ಲ. ಹಾಗಾಗಿ ಈ ಅವಘಡ ನಡೆದಿದೆ ಘಟನೆಯಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. 25ಕ್ಕೂ ಹೆಚ್ಚು ಎಲೆಕ್ನಿಕ್ ಬೈಕ್‌ಗಳು ಸುಟ್ಟುಕರಕಲಾಗಿವೆ. ಈ ಕುರಿತು ತನಿಖೆ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಅಗ್ನಿಶಾಮಕ ದಳ ಉಪನಿರ್ದೇಶಕ ಯೂನಿಸ್ ಮಾಹಿತಿ ನೀಡಿದ್ದಾರೆ.