ಟೀಮ್‌ ಇಂಡಿಯಾ ವಿಶ್ವದಾಖಲೆಯ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿದ ದಕ್ಷಿಣ ಆಫ್ರಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ದೆಹಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಪ್ರವಾಸಿ ಸೌತ್‌ ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಭಾರತ ವಿಶ್ವದಾಖಲೆಯೊಂದನ್ನು ನಿರ್ಮಿಸುವ ಅವಕಾಶವನ್ನು ಕೈಚೆಲ್ಲಿದೆ. ಸತತ 12 ಗೆಲುವು ಸಾಧಿಸಿದ್ದ ಭಾರತ ಇನ್ನೊಂದು ಪಂದ್ಯವನ್ನು ಗೆದ್ದಿದ್ದರೆ ಈ ಸಾಧನೆ ಮಾಡಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗುವ ಅವಕಾಶವಿತ್ತು. ಆದರೆ ಬೃಹತ್‌ ಮೊತ್ತ ದಾಖಲಿಸಿಯೂ ಬೌಲರ್‌ ಗಳ ನೀರಸ ಪ್ರದರ್ಶನದ ಕಾರಣದಿಂದ ಭಾರತವು ಈ ಅವಕಾಶವನ್ನು ಕಳೆದುಕೊಂಡಿತು.
ಟಾಸ್‌ ಸೋತು ಬ್ಯಾಟಿಂಗ್‌ ಗೆ ಇಳಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ಪವರ್‌ಪ್ಲೇನಲ್ಲಿ 51 ರನ್ ಕಲೆಹಾಕಿದರು. ಅಗ್ರ ನಾಲ್ವರು ಆಟಗಾರರು 150 ಪ್ಲಸ್ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಆಫ್ರಿಕಾ ಬೌಲರ್‌ ಗಳನ್ನು ಕಾಡಿದ ಇಶನ್ ಕಿಶನ್ 48 ಎಸೆತಗಳಲ್ಲಿ 76 ರನ್ ಸಿಡಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್‌ ಐಯ್ಯರ್‌ 27 ಎಸೆತಗಳಲ್ಲಿ 37 ರನ್‌ ಕಲೆಹಾಕಿದರು. ಆ ಬಳಿಕ ಪಂತ್ 16 ಎಸೆತಗಳಲ್ಲಿ 29 ರನ್‌ ಸಿಡಿಸಿ ಅಬ್ಬರಿಸಿದರು. ಹಾರ್ದಿಕ್‌ ಪಾಂಡ್ಯ (12 ಎಸೆತಗಳಲ್ಲಿ 31*) ತಮ್ಮ ಫಿನಿಶರ್ ಪಾತ್ರವನ್ನು ಅಚ್ಚುಗಟ್ಟಾಗಿ ನಿಭಾಯಿಸಿದರು. ಇವರ ಭರ್ಜರಿ ಆಟದ ಬಲದಿಂದ ಭಾರತ ನಿಗದಿತ 20 ಓವರ್‌ ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 211 ರನ್‌ ಗಳ ಬೃಹತ್‌ ಮೊತ್ತ ಕಲೆಹಾಕಿತು.
ಗುರಿ ಬೆನ್ನಟ್ಟಿದ ಆಪ್ರಿಕಾ ಪರ 4 ನೇ ವಿಕೆಟ್‌ ಗೆ ಜೊತೆಯಾದ ಡೇವಿಡ್ ಮಿಲ್ಲರ್ (64* ಆಫ್ 31) ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (75* ಆಫ್ 46) ಕೇವಲ 63 ಎಸೆತಗಳಲ್ಲಿ ಅಜೇಯ 131 ರನ್‌ಗಳ ಅಮೋಘ ಜೊತೆಯಾಟ ನಡೆಸುವುದರೊಂದಿಗೆ ಭಾರತದ ಗೆಲುವನ್ನು ಕಸಿದುಕೊಂಡರು.
19.1 ಎಸೆತಗಳಲ್ಲೇ 211 ರನ್‌ ಕಲೆಹಾಕುವ ಮೂಲಕ ದಕ್ಷಿಣ ಆಫ್ರಿಕಾ T20I ಮಾದರಿಯಲ್ಲಿ ತನ್ನ ಗರಿಷ್ಠ ಮೊತ್ತವನ್ನು ಯಶಸ್ವಿಯಾಗಿ ಚೇಸ್‌ ಮಾಡಿದ ದಾಖಲೆ ಬರೆಯಿತು. ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವ ಮೂಲಕ, T20I ಕ್ರಿಕೆಟ್‌ನಲ್ಲಿ ಭಾರತದ 13 ನೇ ಗೆಲುವಿನ ದಾಖಲೆಯ ಅವಕಾಶವನ್ನೂ ಕಿತ್ತುಕೊಂಡಿತು. ಭಾರತವು ಸತತ 12 ಪಂದ್ಯಗಳಲ್ಲಿ ಗೆದ್ದ ದಾಖಲೆಯನ್ನು ರೊಮೇನಿಯಾ, ಅಫ್ಗಾನಿಸ್ತಾನಗಳೊಂದಿಗೆ ಹಂಚಿಕೊಳ್ಳಲಷ್ಟೇ ತೃಪ್ತಿಪಡಬೇಕಾಯಿತು.

ಸಂಕ್ಷಿಪ್ತ ಸ್ಕೋರ್‌:
ಭಾರತ 20 ಓವರ್‌ಗಳಲ್ಲಿ 211/4 (ಇಶಾನ್ ಕಿಶನ್ 76, ಹಾರ್ದಿಕ್ ಪಾಂಡ್ಯ 31*; ವೇಯ್ನ್ ಪಾರ್ನೆಲ್ 1-32)
ದಕ್ಷಿಣ ಆಫ್ರಿಕಾ: 19.1 ಓವರ್‌ಗಳಲ್ಲಿ 212/3 (7 ವಿಕೆಟ್‌ ಗೆಲುವು) ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ 75*, ಡೇವಿಡ್ ಮಿಲ್ಲರ್ 64*; ಆಕ್ಸರ್ ಪಟೇಲ್ 1-40.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!