ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೋಂಕು ತಡೆಗಟ್ಟಲು ಜಿಲ್ಲಾಡಳಿತಕ್ಕೆ ಮೂರು ಅಂಶಗಳ ಸೂತ್ರ ಸೂಚಿಸಿದ ಡಿಸಿಎಂ

ದಿಗಂತ ವರದಿ ರಾಮನಗರ :

ರಾಮನಗರ ಜಿಲ್ಲೆಯಲ್ಲಿ ಕೋವಿಡ್‌ ಸೋಂಕನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಮೂರು ಅಂಶಗಳ ಸೂತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಸೂಚಿಸಿದ್ದು, ಅದರ ಪ್ರಕಾರ ಅತ್ಯಂತ ಕ್ರಮಬದ್ಧವಾಗಿ ಕೋವಿಡ್‌ ಸ್ಥಿತಿಯನ್ನು ನಿರ್ವಹಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.

ಜಿಲ್ಲೆಯ ಸಂಸದರು, ಶಾಸಕರು, ಎಲ್ಲ ಚುನಾಯಿತ ಪ್ರತಿನಿಧಿಗಳ, ಉನ್ನತ ಅಧಿಕಾರಿಗಳನ್ನು ಒಳಗೊಂಡ ವರ್ಚುಯಲ್‌ ಸಭೆಯ ಮೂಲಕ ಶುಕ್ರವಾರ ಜಿಲ್ಲೆಯ ಕೋವಿಡ್‌ ಪರಿಸ್ಥಿತಿಯನ್ನು ಅವಲೋಕನ ಮಾಡಿದ ಡಿಸಿಎಂ ಅವರು; ಕ್ಷಿಪ್ರವಾಗಿ ಸೋಂಕಿತರನ್ನು ಪತ್ತೆ ಹಚ್ಚಿ ಕೋವಿಡ್‌ ಪರೀಕ್ಷೆ ಮಾಡುವುದು, ಕ್ಷಿಪ್ರವಾಗಿ ಫಲಿತಾಂಶ ನೀಡುವುದು ಹಾಗೂ ಪಾಸೀಟಿವ್‌ ಬಂದರೆ ಅಷ್ಟೇ ಕ್ಷಿಪ್ರವಾಗಿ ಚಿಕಿತ್ಸೆ ಆರಂಭಿಸುವ ಮೂರು ಅಂಶಗಳ ಸೂತ್ರವನ್ನು ಸೂಚಿಸಿದರು.

ಇದರ ಜತೆಗೆ, ಲಸಿಕೆ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸುವಂತೆ ಡಿಸಿಎಂ ಸೂಚಿಸಿದರು. ಸರಕಾರದ ಮಾರ್ಗಸೂಚಿಯಂತೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ತಪ್ಪದೇ ಲಸಿಕೆ ಕೊಡಬೇಕು. ಅದಕ್ಕೆ ಬೇಕಾದ ಎಲ್ಲ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜ್ವರ, ಶೀತ ಇದ್ದರೆ ಕೋವಿಡ್‌ ಪರೀಕ್ಷೆ ಮಾಡಿ:
ಯಾರಿಗೆ ಆಗಲಿ ಜ್ವರ, ಶೀತ, ಕೆಮ್ಮು ಇತ್ಯಾದಿ ರೋಗ ಲಕ್ಷಣಗಳಿದ್ದರೆ ಕೂಡಲೇ ಅಂಥವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು ಅಥವಾ ಅಂಥವರು ಯಾರಾದರೂ ಇದ್ದರೆ ನಿರ್ಲಕ್ಷ್ಯ ಮಾಡದೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಲ ಗಂಟೆಗಳಲ್ಲೇ ವರದಿ ಕೊಡುವುದರ ಜತೆಗೆ, ಯಾವುದೇ ವ್ಯಕ್ತಿಗೆ ಕೋವಿಡ್‌ ಪಾಸಿಟಿವ್‌ ಅಂತ ಗೊತ್ತಾದ ತಕ್ಷಣವೇ ಚಿಕಿತ್ಸೆ ಶುರು ಮಾಡಬೇಕು. ಸಿಮ್‌ಟ್ಯಾಮಿಕ್‌ ಅಥವಾ ಎ ಸಿಮ್‌ಟ್ಯಾಮಿಕ್‌ ಅಂತ ವಿಂಗಡಣೆ ಮಾಡುವುದು ಬೇಡ. ಸೋಂಕು ಬಂದ ತಕ್ಷಣ ಚಿಕಿತ್ಸೆ ನೀಡಿದರೆ ರೋಗವು ಉಲ್ಬಣ ಸ್ಥಿತಿಗೆ ಹೋಗುವುದಿಲ್ಲ. ಆಗ ಆಸ್ಪತ್ರೆ, ಐಸಿಯು, ಆಕ್ಷಿಜನ್‌ ಮುಂತಾದವು ಬೇಕಾಗುವುದಿಲ್ಲ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸೂತ್ರದಂತೆ ಕೆಲಸ ಮಾಡಿದರೆ ಮಾಡಿದರೆ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಆಗ ಮಾತ್ರ ಯಾವುದೇ ಸಾವು-ನೋವು ಉಂಟಾಗುವುದಿಲ್ಲ. ಇದನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಅವರು ಸೂಚಿಸಿದರು.
ಸಿಬ್ಬಂದಿ ಕೊರತೆ ಆಗಬಾರದು:
ಶಾಸಕ ರವಿ ಅವರು ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಉತ್ತರ ನೀಡಿದ ಡಿಸಿಎಂ ಅವರು, ಕೂಡಲೇ ಅಗತ್ಯ ಇರುವ ಕಡೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಸಂಪನ್ಮೂಲ ಕೊರತೆ ಕಂಡು ಬಂದರೆ ವಿಪತ್ತು ನಿರ್ವಹಣಾ ನಿಧಿಯಿಂದ ಖರ್ಚು ಮಾಡಿ ಎಂದು ಸಲಹೆ ಮಾಡಿದರು.
ಸಾಧ್ಯವಾದಷ್ಟು ಜನಪ್ರತಿನಿಧಿಗಳು ಸಲಹೆ ಸಹಕಾರ ಪಡೆದುಕೊಳ್ಳಿ. ಅವರು ಎತ್ತುವ ಆಕ್ಷೇಪಗಳಿಗೆ ಕಿವಿಗೊಡಿ. ಸಮಸ್ಯೆಗಳ ಬಗ್ಗೆ ತಿಳಿಸಿದರೆ ಕೂಡಲೇ ಅದನ್ನು ಬಗೆಹರಿಸಿ ಎಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಕೋವಿಡ್‌ ನಿರ್ವಹಣೆಯಲ್ಲಿ ಮೊದಲಿನಿಂದಲೂ ರಾಮನಗರ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಈಗಲೂ ಉತ್ತಮ ನಿರ್ವಹಣೆ ಇದೆ. ದಿನಕ್ಕೆ 1050ರಿಂದ 1100 ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಸಂಖ್ಯೆಯನ್ನು ಹೆಚ್ಚಿಸಲು ಸೂಚಿಸಿದ್ದೇನೆ. ಹಾಗೆಯೇ, ಜಿಲ್ಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇಲ್ಲ. ದಯಾನಂದ ಸಾಗರ್‌ ಮೆಡಿಕಲ್‌ ಕಾಲೇಜ್‌, ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜ್‌ನಲ್ಲಿ ಬೆಡ್‌ಗಳು ಸಾಕಷ್ಟು ಲಭ್ಯ ಇವೆ. ಸರಕಾರವು ಕೂಡ ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಆಸ್ಪತ್ರೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಯಾವುದೇ ಸಾವು ಆದರೂ ತಪ್ಪದೇ ಶವ ಪರೀಕ್ಷೆ ಮಾಡಿ. ಅವರು ಯಾವ ಕಾರಣಕ್ಕೆ ಸತ್ತರು ಎಂಬ ಮಾಹಿತಿ ನಮ್ಮಲ್ಲಿರುತ್ತದೆ. ಜತೆಗೆ, ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಎಲ್ಲರೂ ತಪ್ಪದೇ ಭೇಟಿ ನೀಡಿ ಎಂದು ಡಿಸಿಎಂ ಸೂಚಿಸಿದರು.
ಲಸಿಕೆ ಪಡೆಯಲು ಮನವೊಲಿಸಿ:
ಅಲ್ಪಸಂಖ್ಯಾತ ಸಮುದಾಯದವರೂ ಸೇರಿ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ದೂರುಗಳು ಬಂದಿವೆ. ಅವರನ್ನು ಮನವೊಲಿಸಿ ಲಸಿಕೆ ಪಡೆಯುವಂತೆ ಮಾಡಿ. ಅದಕ್ಕೆ ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆಯಿರಿ. ಯಾವ ಕಾರಣಕ್ಕೂ ಲಸಿಕೆ ಅಭಿಯಾನ ವ್ಯತ್ಯಾಸ ಆಗಬಾರದು ಎಂದು ಡಿಸಿಎಂ ನಿರ್ದೇಶನ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಡಿ.ಕೆ.ಸುರೇಶ್‌ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಕೆಲ ಉತ್ತಮ ಸಲಹೆಗಳನ್ನು ನೀಡಿದ್ದು, ಅವುಗಳನ್ನು ಜಾರಿಗೆ ತರಲಾಗುವುದು ಎಂದರು ಡಿಸಿಎಂ.
ಸದ್ಯಕ್ಕೆ ರಾಮನಗರ ಜಿಲ್ಲಾ ಕೇಂದ್ರದಲ್ಲಿಯೇ ಕೋವಿಡ್‌ ಟೆಸ್ಟ್‌ಗಳನ್ನು ಮಾಡಲಾಗುತ್ತಿದೆ. ಅಲ್ಲಿ ಯಾವುದೇ ಕೊರತೆ ಇಲ್ಲ ಎಂದ ಅವರು; ತಮ್ಮಲ್ಲಿ ರೋಗ ಲಕ್ಷಣಗಳಿದ್ದರೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ತಡ ಮಾಡಬಾರದು. ಎಲ್ಲೆಲ್ಲಿ ಪರೀಕ್ಷೆ ಮಾಡಲಾಗುತ್ತದೆ ಎಂಬ ವಿವರಗಳನ್ನು ಜನರಿಗೆ ವ್ಯಾಪಕವಾಗಿ ತಿಳಿಸುವಂತೆ ಸೂಚಿಸಿದ್ದೇನೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್ ಅವರು ಜಿಲ್ಲೆಯ ಕೋವಿಡ್‌ ನಿರ್ವಹಣೆ ಬಗ್ಗೆ ಪವರ್‌ ಪಾಯಂಟ್‌ ಪ್ರಸೆಂಟೇಶನ್‌ ನೀಡಿದರು.
ಸಂಸದ ಡಿ.ಕೆ.ಸುರೇಶ್, ಶಾಸಕರಾದ ಅನಿತಾ ಕುಮಾರಸ್ವಾಮಿ, ಮಂಜುನಾಥ, ರವಿ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್‌, ಡಿಎಚ್‌ಒ ಡಾ.ನಿರಂಜನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss