ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….
ಹೊಸ ದಿಗಂತ ವರದಿ, ಮಡಿಕೇರಿ:
ಕುಟುಂಬದವರ ಜೊತೆ ಕುಶಾಲನಗರದಿಂದ ಮಡಿಕೇರಿಗೆ ಆಗಮಿಸುತ್ತಿದ್ದ ಭಾರತೀಯ ಸೇನೆಯ ಸೈನಿಕ ಮತ್ತವರ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಕಾರಿಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದ ದುಷ್ಕರ್ಮಿಗಳು ಬಳಿಕ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿರುವ ಘಟನೆ ಇಲ್ಲಿಗೆ ಸಮೀಪದ ಬೋಯಿಕೇರಿ ಬಳಿ ನಡೆದಿದೆ.
ಭಾನುವಾರ ರಾತ್ರಿ ಕುಶಾಲನಗರದಿಂದ ಮಡಿಕೇರಿಗೆ ಆಗಮಿಸುತ್ತಿದ್ದ ಯೋಧ ಅಶೋಕ್ ಕುಮಾರ್ ಅವರ ಕಾರಿಗೆ ಬೋಯಿಕೇರಿ ಸಮೀಪ ಕಾರೊಂದು ಡಿಕ್ಕಿಯಾಗಿದೆ. ಈ ಸಂದರ್ಭ ಕಾರಿನಲ್ಲಿದ್ದವರು ಸ್ಥಳಕ್ಕೆ 50ಕ್ಕೂ ಹೆಚ್ಚು ಗೂಂಡಾಗಳನ್ನು ಕರೆಸಿ ಮಹಿಳೆಯರು, ವಯಸ್ಕರೆನ್ನದೆ ಯೋಧನ ಕುಟುಂಬದವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಈ ಸಂದರ್ಭ ಪೊಲೀಸ್ ತುರ್ತು ಸ್ಪಂದನ ವಾಹನಕ್ಕೆ ಕರೆ ಹೋಗಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಲ್ಲಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಗಂಭೀರ ಗಾಯಗೊಂಡಿರುವ ಸೈನಿಕ ಮತ್ತವರ ಕುಟುಂಬದ ಸದಸ್ಯರು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಎಂಎಲ್ಸಿ ಭೇಟಿ: ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈನಿಕ ಕುಟುಂಬವನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಯೋಧ ಅಶೋಕ್ ಕುಮಾರ್ ಮಾತನಾಡಿ, ನಮ್ಮ ಕಾರಿಗೆ ಡಿಕ್ಕಿಪಡಿಸಿದ ಮತ್ತೊಂದು ಕಾರಿನ ವ್ಯಕ್ತಿಗಳು ಗುಂಪು ಸೇರಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ, ಅಲ್ಲದೆ ಚಿನ್ನಾಭರಣ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ವೀಣಾ ಅಚ್ಚಯ್ಯ, ಶಾಂತಿಯುತವಾದ ಕೊಡಗಿನಲ್ಲಿ ಈ ರೀತಿಯ ಘಟನೆ ನಡೆದಿರುವುದು ಖಂಡನೀಯ. ಈಗಾಗಲೇ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ ಎಂದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಚಿನ್ನಭರಣ ಕಳವು ಮಾಡಿರುವ ಆರೋಪವೂ ಕೇಳಿ ಬಂದಿದ್ದು, ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಬೇಕೆಂದು ಹೇಳಿದರು.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಯೋಧರ ನಾಡು ಕೊಡಗಿನಲ್ಲೇ ಸೈನಿಕ ಕುಟುಂಬದ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಕಾಂಗ್ರೆಸ್ ಪ್ರಮುಖರಾದ ಹಾರಿಸ್, ಸುನಿಲ್ ಪತ್ರಾವೋ ಮತ್ತಿತರರು ಹಾಜರಿದ್ದರು.