Wednesday, June 29, 2022

Latest Posts

ಆಕ್ಸಿಜನ್ ಕೊರತೆಯಿಂದ ರಾಜ್ಯಗಳಲ್ಲಿ ಸಾವು ಆಗಿಲ್ಲ: ವಿಪಕ್ಷ ಆಳ್ವಿಕೆಯ ರಾಜ್ಯಗಳಿಂದಲೂ ಬಂತು ಸ್ಪಷ್ಟನೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

 ದೇಶದಲ್ಲಿ ಎರಡನೇ ಅಲೆ ವೇಳೆ ಆಕ್ಸಿಜನ್ ಕೊರತೆ ಬಗ್ಗೆ ಭಾರೀ ಗುಲ್ಲು ಸೃಷ್ಟಿಯಾಗಿದ್ದ ನಡುವೆಯೇ , ಇದೀಗ ವಿಪಕ್ಷ ಆಳ್ವಿಕೆಯ ರಾಜ್ಯಗಳು ಸೇರಿದಂತೆ ಅನೇಕ ರಾಜ್ಯಗಳು ತಮ್ಮಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿಲ್ಲ ಎಂಬುದಾಗಿ ಸ್ಪಷ್ಟಪಡಿಸಿವೆ.
ಇದರಿಂದಾಗಿ , ಎರಡನೇ ಅಲೆ ವೇಳೆ ಆಕ್ಸಿಜನ್ ಕೊರತೆ ಕುರಿತಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಗುರಿಯಾಗಿರಿಸಿಕೊಂಡು ಸೃಷ್ಟಿಸಲಾಗಿದ್ದ ಗುಲ್ಲು ಯಾಕಾಗಿ ನಡೆದಿತ್ತೆಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕೊರೋನಾ ದ್ವಿತೀಯ ಅಲೆಯ ವೇಳೆ ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿಲ್ಲ ಎಂಬುದಾಗಿ ಕೇಂದ್ರ ಸರಕಾರ ಮಂಗಳವಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿತ್ತು. ಇದಕ್ಕೆ ಕಾಂಗ್ರೆಸ್ , ಆಮ್ ಆದ್ಮಿ ಪಕ್ಷ ಸೇರಿದಂತೆ ವಿಪಕ್ಷಗಳು ಕೇಂದ್ರ ಸರಕಾರವನ್ನು ಟೀಕಿಸಿದ್ದವು. ಆದರೆ ತಾನು ರಾಜ್ಯಗಳು ನೀಡಿದ ವರದಿಯ ಆಧಾರದಲ್ಲೇ ಈ ಹೇಳಿಕೆ ನೀಡಿದ್ದಾಗಿ ಕೇಂದ್ರ ಸರಕಾರ ಸ್ಪಷ್ಟಪಡಿಸುತ್ತಿದ್ದಂತೆಯೇ, ಟೀಕಿಸಿದ್ದ ಕಾಂಗ್ರೆಸ್ , ಆಪ್ ನೇತೃತ್ವದ ರಾಜ್ಯ ಸರಕಾರಗಳು ಸೇರಿದಂತೆ ಅನೇಕ ರಾಜ್ಯ ಸರಕಾರಗಳು ಕೂಡಾ ಆಕ್ಸಿಜನ್ ಕೊರತೆಯಿಂದ ತಮ್ಮಲ್ಲಿ ಸಾವು ಸಂಭವಿಸಿಲ್ಲ ಎಂಬುದಾಗಿ ಹೇಳಿಕೆ ನೀಡಿವೆ.
ಛತ್ತೀಸ್‌ಗಢದ ಆರೋಗ್ಯ ಸಚಿವ ಟಿ.ಎಸ್.ಸಿಂಗ್ ದೇವ್ , ಛತ್ತೀಸ್‌ಗಢದಲ್ಲಿ ಆಕ್ಸಿಜನ್ ಕೊರತೆಯಿಂದ ಯಾವುದೇ ರೋಗಿಯ ಸಾವು ಸಂಭವಿಸಿಲ್ಲ. ನಮ್ಮದು ಆಕ್ಸಿಜನ್ ಅಧಿಕ ಪ್ರಮಾಣದಲ್ಲಿ ಲಭ್ಯವಿರುವ ರಾಜ್ಯವಾಗಿದೆ ಎಂದಿದ್ದಾರೆ. ಛತ್ತೀಸ್‌ಗಢದಲ್ಲೇ ಎರಡನೇ ಅತಿ ಹೆಚ್ಚು ಕೋವಿಡ್ ಪೀಡಿತ ಜಿಲ್ಲೆ ಎಂದು ಪರಿಗಣಿತವಾಗಿದ್ದ ದುರ್ಗ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಆಕ್ಸಿಜನ್ ಕೊರತೆ ಮತ್ತು ವೆಂಟಿಲೇಟರ್ ಕೊರತೆಯಿಂದ ಸಾವುಗಳು ಸಂಭವಿಸಿತ್ತು ಎಂಬುದಾಗಿ ವರದಿಗಳು ತಿಳಿಸಿದ್ದವು.ಇದು ದೇಶದ 15 ಗರಿಷ್ಠ ಕೊರೋನಾ ಪೀಡಿತ ಜಿಲ್ಲೆಯೆಂದೂ ಪರಿಗಣಿತವಾಗಿತ್ತು.
ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು , ದಿಲ್ಲಿಯಲ್ಲಿ ಕೋವಿಡ್ -19 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವಿಗೀಡಾಗಿದ್ದಾರೆ ಎನ್ನಲು ಯಾವುದೇ ಅಂಕಿ-ಅಂಶಗಳು ನಮ್ಮಲ್ಲಿ ಇಲ್ಲ ಎಂದಿದ್ದಾರೆ.ಜೊತೆಯಲ್ಲೇ ಅಂದು ಸಂಭವಿಸಿದ ಸಾವುಗಳ ಬಗ್ಗೆ ಪರಿಶೀಲಿಸಿಸಲು ಆಡಿಟ್ ಕಮಿಟಿಯೊಂದನ್ನು ರಚಿಸಲು “ಕೇಂದ್ರ ಸರಕಾರ ಅವಕಾಶ ನೀಡಿಲ್ಲ “ಎಂದು ದೂರಿದ್ದಾರೆ. ದಿಲ್ಲಿಯ ಗಂಗಾರಾಮ್ ಆಸ್ಪತ್ರೆ, ಜೈಪುರ ಗೋಲ್ಡನ್ ಆಸ್ಪತ್ರೆ, ಭಾತ್ರಾ ಆಸ್ಪತ್ರೆಗಳಲ್ಲಿ ಏ.23 ಮತ್ತು ಮೇ1ರ ನಡುವೆ 62 ಮಂದಿ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾಗಿದ್ದರೆಂದು ಈ ಹಿಂದೆ ವರದಿಯಾಗಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.
ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಸರಕಾರ ಕೂಡಾ ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆಯಾಗಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಯಾವುದೇ ಸಾವು ಸಂಭವಿಸಿಲ್ಲ ಎಂಬುದಾಗಿ ಬಾಂಬೆ ಹೈಕೋರ್ಟಿನ ಔರಂಗಾಬಾದ್ ಪೀಠಕ್ಕೆ ಮಾಹಿತಿ ನೀಡಿದೆ. ಮಹಾರಾಷ್ಟರದಲ್ಲಿ ಏ.13 ಮತ್ತು 21 ರ ನಡುವೆ ಆಕ್ಸಿಜನ್‌ನ ತೀವ್ರ ಕೊರತೆಯುಂಟಾಗಿ ಕನಿಷ್ಠ 30 ಸಾವು ಸಂಭವಿಸಿತ್ತೆಂದು ಈ ಹಿಂದೆ ವರದಿಗಳು ಬಂದಿದ್ದವು.
ಹಾಗೆಯೇ ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶ, ಉತ್ತರಾಖಂಡ್, ಗುಜರಾತ್, ಹರ್ಯಾಣ, ಮಧ್ಯಪ್ರದೇಶ, ಕರ್ನಾಟಕ, ಗೋವಾ, ರಾಜಸ್ತಾನಗಳಿಂದ ಕೂಡಾ ಆಕ್ಸಿಜನ್ ಕೊರತೆ ಕಾರಣದಿಂದ ಕೋವಿಡ್ ರೋಗಿಗಳ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿವೆ.
ಅಂದು ಹೇಗೆ ನಡೆದಿತ್ತು ಗುಲ್ಲು?
ದಿಲ್ಲಿಯಲ್ಲಿ ಆಕ್ಸಿಜನ್ ಭಾರೀ ಕೊರತೆ ಉಂಟಾಗಿ ಕೊರೋನಾ ಸಾವುಗಳು ಸಂಭವಿಸಿವೆ. ಇದಕ್ಕೆ ಕೇಂದ್ರ ಸರಕಾರ ಸಾಕಷ್ಟು ಪ್ರಮಾಣದಲ್ಲಿ ತಮಗೆ ಆಕ್ಸಿಜನ್ ಪೂರೈಸದಿದ್ದುದೇ ಕಾರಣ ಎಂಬುದಾಗಿ ಕಾಂಗ್ರೆಸ್, ಆಪ್ ನೇತೃತ್ವದ ಆಳ್ವಿಕೆಯಿರುವ ಸರಕಾರಗಳು ಮತ್ತು ಕೆಲವು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ಹೇಳಿಕೆ ನೀಡಿದ್ದರಿಂದ ಭಾರೀ ಕೋಲಾಹಲ ಉಂಟಾಗಿತ್ತು. ದಿಲ್ಲಿಗೆ 1200 ಮೆ.ಟ.ಆಕ್ಸಿಜನ್ ಅಗತ್ಯವಿದೆ ಎಂದು ದಿಲ್ಲಿಯ ಕೇಜ್ರಿವಾಲ್ ಸರಕಾರ ಹೇಳಿಕೆ ನೀಡಿ, ತನ್ನ ಪ್ರಜೆಗಳ ಜೀವ ಉಳಿಸಲು ತಾನು ಕೇಂದ್ರದ ಬಳಿ ಭಿಕ್ಷೆ ಬೇಡುತ್ತಿದ್ದೇನೆ ಎಂಬುದಾಗಿ ಸಿಎಂ ಕೇಜ್ರಿವಾಲ್ ನೀಡಿದ್ದ ಹೇಳಿಕೆ ಭಾರೀ ಸುದ್ದಿ ಮಾಡಿತ್ತು.ಸರ್ವೋಚ್ಚ ನ್ಯಾಯಾಲಯ ಕೂಡಾ ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡು ಎರಡು ದಿನಗಳ ಒಳಗೆ ದಿಲ್ಲಿಗೆ ನಿಗದಿತ ಆಕ್ಸಿಜನ್ ಒದಗಿಸಬೇಕೆಂದು ತಾಕೀತು ಮಾಡಿತ್ತು. ಆದರೆ ಅನಂತರ ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸಮಿತಿ ನಡೆಸಿದ ತನಿಖೆಯ ವೇಳೆ ದಿಲ್ಲಿಗೆ ಅಷ್ಟು ಆಕ್ಸಿಜನ್‌ನ ಅಗತ್ಯವಿರಲಿಲ್ಲ. ಇದರಿಂದ ದಿಲ್ಲಿ ಸರಕಾರ ಕೇಳಿದ್ದ ಆಕ್ಸಿಜನ್ 12 ರಾಜ್ಯಗಳಿಗೆ ಅಗತ್ಯವಿರುವ ಆಕ್ಸಿಜನ್ ಪೂರೈಕೆಗೆ ಅಡಚಣೆಯುಂಟು ಮಾಡಿತ್ತೆಂಬುದೂ ಬಯಲಿಗೆ ಬಂದಿತ್ತು.ವಿವಿಧ ವಿಪಕ್ಷೀಯ ಆಳ್ವಿಕೆಯ ರಾಜ್ಯಗಳು ಆಕ್ಸಿಜನ್ ಕೊರತೆಗಾಗಿ ಕೇಂದ್ರದ ವಿರುದ್ಧ ಆರೋಪಗಳನ್ನು ಮಾಡಿ ಸಾವಿಗೆ ಕೇಂದ್ರವೇ ಹೊಣೆ ಎಂದು ಬಿಂಬಿಸಲು ಮುಂದಾಗಿದ್ದವು.ಅಲ್ಲದೆ ಕೆಲವು ನ್ಯಾಯಾಲಯಗಳೂ ಈ ಬಗ್ಗೆ ಕೇಂದ್ರಕ್ಕೆ ತಾಕೀತು ಮಾಡಿದ್ದವು . ಈ ಎಲ್ಲ ವಿದ್ಯಮಾನಗಳಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ , ವಿದೇಶಿ ಮಾಧ್ಯಮಗಳಲ್ಲೂ ಮೋದಿ ಸರಕಾರದ ವಿರುದ್ಧ ಭಾರೀ ಪ್ರಚಾರಕ್ಕೆ ಕಾರಣವಾಗಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss