ಎಸ್ಕಾಂ ಗಳಿಗೆ ಸಾಲ : ಷರತ್ತುಗಳನ್ನು ಕೈಬಿಡಲು ಕೇಂದ್ರಕ್ಕೆ ಮನವಿ – ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಎಸ್ಕಾಂಗಳಿಗೆ ಸಾಲ ಪಡೆಯಲು ವಿಧಿಸಿರುವ ಕೆಲವು ಷರತ್ತುಗಳನ್ನು ಕೈಬಿಡುವಂತೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹೊಸದಿಲ್ಲಿಯಲ್ಲಿ ರಾಜ್ಯದ ಸಂಸದರ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಎಸ್ಕಾಂ ಗಳಿಗೆ ಸಹಾಯಧನ, ಅಂತರ ಇಲಾಖಾ ಬಿಲ್ ಗಳನ್ನು ಕೊಡಬೇಕೆನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಒಂದೇ ವರ್ಷಕ್ಕೆ ಇಷ್ಟು ಷರತ್ತುಗಳನ್ನು ಹಾಕದಿರುವಂತೆ ಮನವಿ ಮಾಡಲಾಗಿದೆ. ಅವುಗಳನ್ನು ಮನ್ನಾ ಮಾಡಿದರೆ ಎಸ್ಕಾಂ ಗಳಿಗೆ ಬ್ಯಾಂಕ್ ನಿಂದ ಹಣ ದೊರೆಯಲಿದೆ. ಕರ್ನಾಟಕ ಪವರ್ ಜನರೇಷನ್ ಕಂಪನಿಗೆ ಈ ಮೊತ್ತವನ್ನು ಪಾವತಿಸಬಹುದು. ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕೆಲವು ಸ್ಪಷ್ಟೀಕರಣಗಳ ಅಗತ್ಯವಿದೆ ಎಂದಿದ್ದಾರೆ.

ಅಧಿಕಾರಿಗಳೊಂದಿಗಿನ ಸಭೆಯ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮದು ಅತಿ ಹೆಚ್ಚು ಇಂಧನ ಸಹಾಯಧನ ನೀಡುವ ರಾಜ್ಯ. ₹ 15000 ಕೋಟಿಗಳ ಸಹಾಯಧನವನ್ನು ಕರ್ನಾಟಕ ಒದಗಿಸುತ್ತದೆ. ಅದಕ್ಕೆ ಹಿಂದಿನ ವರ್ಷಗಳ ಬಾಕಿ ಮೊತ್ತವನ್ನು ನೀಡಲು ಸಮಯಾವಕಾಶದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಇಂಧನ ಕ್ಷೇತ್ರದಲ್ಲಿ ಶೇ. 4 ವಿತ್ತೀಯ ಕೊರತೆಗೆ ಅನುಮತಿ ನೀಡಿದ್ದು, ಶೇ. 0.5 ಇಂಧನ ಕ್ಷೇತ್ರಕ್ಕೆ ಮೀಸಲಿಡಲು ಸೂಚನೆ ನೀಡಿದ್ದು, ಇಂಧನ ಕ್ಷೇತ್ರದ ಸುಧಾರಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸಚಿವರು ತಿಳಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!