ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿರುವುದಕ್ಕೆ ನಮಗೆ ನಿರಾಸೆ ಆಗಿರುವುದು ಸತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.
ಚನ್ನಪಟ್ಟಣದಲ್ಲಿ ನಮ್ಮ ಮಿತ್ರ ಪಕ್ಷ ಜೆಡಿಎಸ್ ಪಕ್ಷ, ಶಿಗ್ಗಾಂವಿ ಹಾಗೂ ಸಂಡೂರಿನಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದೆವು. ಆದರೆ, ನಮಗೆ ನಿರಾಸೆ ಆಗಿರುವುದು ಸತ್ಯ ಎಂದು ನುಡಿದರು. ಹಿನ್ನಡೆಯ ಕಾರಣ ಏನು? ಯಾತಕ್ಕೋಸ್ಕರ ನಮಗೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ ಎಂಬ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಕುಳಿತು ಚರ್ಚೆ ಮಾಡಲಿದ್ದೇವೆ. ತಪ್ಪನ್ನು ಸರಿಪಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ತಿಳಿಸಿದರು.
ನಮಗೆ ಈಗ ಕೇವಲ ಫಲಿತಾಂಶ ಸಿಕ್ಕಿದೆ. ಮೊದಲ ಬಾರಿ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಸುಮಾರು 80 ಸಾವಿರ ಮತಗಳನ್ನು ಪಡೆದಿದೆ. ನಾವು ಇಲ್ಲಿ ಎಂಟ್ಹತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ನಮಗಿತ್ತು. ಆ ರೀತಿಯ ಎಲ್ಲ ಶ್ರಮವನ್ನು ಹಾಕಿದ್ದೆವು ಎಂದು ಪ್ರಶ್ನೆಗೆ ಉತ್ತರಿಸಿದರು. ಅದರ ನಡುವೆ ನಮಗೆ ಗೆಲ್ಲಲು ಸಾಧ್ಯವಾಗಿಲ್ಲ; ಸಂಡೂರಿನ ಫಲಿತಾಂಶವನ್ನು ಹಿನ್ನಡೆ ಎಂದು ನಾವು ಭಾವಿಸುವುದಿಲ್ಲ. ಉತ್ತಮ ಮತಗಳನ್ನು ನಾವು ಪಡೆದಿದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಕುಳಿತು ಹಿನ್ನಡೆಗೆ ಕಾರಣಗಳೇನು ಎಂದು ಚರ್ಚಿಸುತ್ತೇವೆ ಎಂದು ನುಡಿದರು.
ಶಿಗ್ಗಾಂವಿ ಫಲಿತಾಂಶ ಆಘಾತ ತಂದಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸುಪುತ್ರ ಅಲ್ಲಿ ಬಿಜೆಪಿ ಸ್ಪರ್ಧಿಯಾಗಿದ್ದರು. ಬಿಜೆಪಿಯ ಎಲ್ಲ ಕಾರ್ಯಕರ್ತರು ಅಲ್ಲಿ ಹಗಲು- ರಾತ್ರಿ ಶ್ರಮವನ್ನು ಹಾಕಿದ್ದರು. ಬೊಮ್ಮಾಯಿಯವರು ಅಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಜನರು ಇವತ್ತು ಆಡಳಿತ ಪಕ್ಷದ ಕಡೆ ವಾಲಿದ್ದಾರೆ. ಇದೆಲ್ಲವನ್ನೂ ನಾವು ಹಿರಿಯರು ಕುಳಿತು ಸೋಲಿನ ವಿಮರ್ಶೆ ಮಾಡುತ್ತೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.