ಕದಂಬ ನೌಕಾನೆಲೆ ತನ್ನ ಕಾರ್ಯಕ್ಷಮತೆಯಿಂದ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ: ಸಚಿವ ರಾಜನಾಥ್ ಸಿಂಗ್ ಶ್ಲಾಘನೆ

ಹೊಸದಿಗಂತ ವರದಿ, ಅಂಕೋಲಾ:
ಕದಂಬ ಮನೆತನ ನಮ್ಮ ನೆಲದ ಇತಿಹಾಸವನ್ನು ಸ್ವರ್ಣಾಕ್ಷರಗಳಲ್ಲಿ ದಾಖಲಿಸಿ ಜಗತ್ತಿನ ಗಮನ ಸೆಳೆದ ರಾಜ ಮನೆತನವಾಗಿದ್ದು ಕದಂಬರ ಹೆಸರಿನಲ್ಲೇ ನೌಕಾನೆಲೆ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಕದಂಬ ನೌಕಾನೆಲೆ ಸಹ ಕದಂಬರಂತೆ ಜಾಗತಿಕವಾಗಿ ತನ್ನ ಕಾರ್ಯಕ್ಷಮತೆಯಿಂದ ಗುರುತಿಸಿಕೊಳ್ಳುತ್ತಿದೆ ಎಂದು ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಅರ್ಗಾದ ಕದಂಬ ನೌಕಾನೆಲೆಗೆ ಭೇಟಿ ನೀಡಿ ನೌಕಾನೆಲೆ ಸೈನಿಕರು ಮತ್ತು ಅವರ ಕುಟುಂಬ ವರ್ಗದವರ ಕುಶಲೋಪರಿ ವಿಚಾರಿಸಿ ಮಾತನಾಡಿದ ಅವರು, ಇಂದು ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನ ಸಂಪೂರ್ಣ ಬದಲಾಗಿದೆ, ಭಾರತದ ಸಲಹೆಗಳನ್ನು ಜಾಗತಿಕ ಮಟ್ಟದಲ್ಲಿ ಗೌರವದಿಂದ ಸ್ವಾಗತಿಸಲಾಗುತ್ತಿದೆ. ಜಗತ್ತು ಇಂದು ಭಾರತವನ್ನು ಗಂಭೀರವಾಗಿ ಪರಿಗಣಿಸುತ್ತಿರುವುದರ ಹಿಂದೆ ನಮ್ಮ ಹೆಮ್ಮೆಯ ಸೈನ್ಯದ ಕೊಡುಗೆಯಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟರು.
ನಮ್ಮ ಸೈನ್ಯದ ಮೇಲೆ ದೇಶವಾಸಿಗಳಿಗೆ ಸಮ್ಮಾನ ಮತ್ತು ಗೌರವ ಇದೆ, ನಮ್ಮ ಸೈನಿಕರ ಕೈಯಲ್ಲಿ ದೇಶ ಸುರಕ್ಷಿತ ಎಂಬ ಗೌರವ ಇದೆ. ಪ್ರಧಾನಿ ನರೇಂದ್ರ ಮೋದಿಯವರು ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವಪೂರ್ಣ ಬದಲಾವಣೆ ತರುವ ಮೂಲಕ ವಿಶ್ವವೇ ನಮ್ಮನ್ನು ಗೌರವದಿಂದ ಕಾಣುವಂತೆ ಮಾಡಿದ್ದಾರೆ. ರಾಷ್ಟ್ರದ ಸ್ವಾಭಿಮಾನ ಕಾಪಾಡುವ ಕಾರ್ಯವು ಅತ್ಯಂತ ಶ್ರೇಷ್ಠ ಕಾರ್ಯವಾಗಿದ್ದು, ಸೈನಿಕರು ಕಠಿಣ ಪರಿಸ್ಥಿತಿಯಲ್ಲೂ ಎಲ್ಲಾ ಸವಾಲುಗಳನ್ನು ಎದುರಿಸಿ ದೇಶಕ್ಕಾಗಿ ದುಡಿಯಲು ರಾಷ್ಟ್ರೀಯ ಸ್ವಾಭಿಮಾನದ ಪ್ರೇರಣೆ ಕಾರಣವಾಗಿದೆ ಎಂದರು.
ರಾಷ್ಟ್ರೀಯ ನೌಕಾಪಡೆಯ ಉನ್ನತ ಅಧಿಕಾರಿಗಳು, ಕದಂಬ ನೌಕಾನೆಲೆ ಅಧಿಕಾರಿಗಳು, ಸೈನಿಕರು ಮತ್ತು ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!