ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿ ಚಾಂಪಿಯನ್ ಇಂಗ್ಲೆಂಡ್ ಲಂಕಾ ಎದುರುಕೇವಲ 156 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಶ್ರೀಲಂಕಾಗೆ ಗೆಲ್ಲಲು ಸಾಧಾರಣ ಗುರಿ ನೀಡಿದೆ.
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗದುಕೊಂಡರು. ಮೊದಲ ವಿಕೆಟ್‌ಗೆ ಜಾನಿ ಬೇರ್‌ಸ್ಟೋವ್ ಹಾಗೂ ಡೇವಿಡ್ ಮಲಾನ್ 6.3 ಓವರ್‌ಗಳಲ್ಲಿ 45 ರನ್‌ಗಳ ಜತೆಯಾಟವಾಡುವ ಮೂಲಕ ಸಾಧಾರಣ ಆರಂಭ ಒದಗಿಸಿಕೊಟ್ಟರು. ಆದರೆ ಮೊದಲ ವಿಕೆಟ್ ಪತನದ ಬಳಿಕ ಇಂಗ್ಲೆಂಡ್ ತಂಡವು ನಾಟಕೀಯ ಕುಸಿತ ಕಂಡಿತು.
28 ರನ್ ಗಳಿಸಿದ್ದ ಡೇವಿಡ್ ಮಲಾನ್ ಅವರನ್ನು ಬಲಿ ಪಡೆಯುವಲ್ಲಿ ಏಂಜಲೋ ಮ್ಯಾಥ್ಯೂಸ್ ಯಶಸ್ವಿಯಾದರು.
ಇದಾದ ಬಳಿಕ ಇಂಗ್ಲೆಂಡ್ ತನ್ನ ಖಾತೆಗೆ 40 ರನ್ ಸೇರಿಸಿವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು. ಜೋ ರೂಟ್ 3 ರನ್ ಬಾರಿಸಿ ರನೌಟ್ ಆದರೆ, ಜಾನಿ ಬೇರ್‌ಸ್ಟೋವ್ ಬ್ಯಾಟಿಂಗ್ 30 ರನ್‌ಗಳಿಗೆ ಸೀಮಿತವಾಯಿತು. ಇನ್ನು ನಾಯಕ ಜೋಸ್ ಬಟ್ಲರ್ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಲಿಯಮ್ ಲಿವಿಂಗ್‌ಸ್ಟೋನ್ ಕೇವಲ ಒಂದು ರನ್ ಗಳಿಸಿ ಲಹಿರು ಕುಮಾರಗೆ ಎರಡನೇ ಬಲಿಯಾದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್ ನೆಲಕಚ್ಚಿ ಆಡುವ ಯತ್ನ ನಡೆಸಿದರಾದರೂ, ಮತ್ತೊಂದು ತುದಿಯಲ್ಲಿ ಅವರಿಗೆ ಸೂಕ್ತ ಸಾಥ್ ಸಿಗಲಿಲ್ಲ. ಬೆನ್ ಸ್ಟೋಕ್ಸ್ 73 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 43 ರನ್ ಬಾರಿಸಿ ಲಹಿರು ಕುಮಾರಗೆ ಮೂರನೇ ಬಲಿಯಾದರು.
ಇನ್ನು ಮೋಯಿನ್ ಅಲಿ 15 ಹಾಗೂ ಡೇವಿಡ್ ವಿಲ್ಲಿ 14 ರನ್ ಬಾರಿಸಿದ್ದು ಬಿಟ್ಟರೆ, ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಕೂಡಾ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು 33.2 ಓವರ್‌ಗಳಲ್ಲಿ 156 ರನ್‌ಗಳಿಗೆ ಸರ್ವಪತನ ಕಂಡಿತು.