ಹೊಸದಿಗಂತ ಆನ್ ಲೈನ್ ಡೆಸ್ಕ್:
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಾಮಪತ್ರದಲ್ಲಿ ತನ್ನ ವಿರುದ್ಧದ ಆರು ಕ್ರಿಮಿನಲ್ ಕೇಸ್ ಗಳನ್ನು ಬಹಿರಂಗಗೊಳಿಸದ ಕಾರಣ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಸುವೇಂದು ಅಧಿಕಾರಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಬ್ಯಾನರ್ಜಿ ಅವರು ತಮ್ಮ ವಿರುದ್ಧ ಇರುವ 6 ಕ್ರಿಮಿನಲ್ ಪ್ರಕರಣಗಳನ್ನು ಮರೆಮಾಚಿದ್ದಾರೆ ಎಂದು ಇತ್ತೀಚೆಗೆ ಟಿಎಂಸಿಯಿಂದ ಬಿಜೆಪಿ ಸೇರಿದ ಅಧಿಕಾರಿ, ಆರೋಪಿಸಿದ್ದಾರೆ.
ಬ್ಯಾನರ್ಜಿ ಅವರು ಟಿಎಂಸಿ ಅಭ್ಯರ್ಥಿಯಾಗಿ ಸಲ್ಲಿಸಿರುವ ಅಫಿಡೆವಿಟ್ನಲ್ಲಿ ಅವರ ವಿರುದ್ಧ ಇರುವ ಆರು ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ತಿಳಿಸಿಲ್ಲ. ಅಸ್ಸಾಂನಲ್ಲಿ 2018 ರಲ್ಲಿ ದಾಖಲಾಗಿರುವ ಐದು ಎಫ್.ಐ.ಆರ್.ಗಳು ಮತ್ತು ಒಂದು ಸಿಬಿಐ ಎಫ್.ಐ.ಆರ್. ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ’ ಎಂದಿರುವ ಅಧಿಕಾರಿ, ಈ ಬಗ್ಗೆ ಎಲ್ಲ ಪುರಾವೆಗಳನ್ನು ಒದಗಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ಹೇಳಿದ್ದಾರೆ.
ದೂರಿನಲ್ಲಿ ಕೇಸ್ ಗಳ ಸಂಖ್ಯೆಗಳನ್ನು ಉಲ್ಲೇಖಿಸಿದ್ದರೂ ಟಿಎಂಸಿ ಮುಖಂಡೆ ಮೇಲಿನ ಆರೋಪಗಳು ಸಮರ್ಪಕವಾಗಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.
ಮಮತಾ ಬ್ಯಾನರ್ಜಿ ನಾಮಪತ್ರ ತಿರಸ್ಕರಿಸಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇನೆ. ಅವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯಿದೆ. ಅವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇನೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
ಈ ವಿಚಾರದ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.