Sunday, June 26, 2022

Latest Posts

ವೈದ್ಯ ಸೀಟು ಹಂಚಿಕೆ ವಿಳಂಬ : ಸುಪ್ರೀಂ ಮೊರೆ ಹೋಗುವಂತೆ ರಾಜ್ಯ ಸರಕಾರಕ್ಕೆ ಎಚ್.ಡಿ.ಕೆ. ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ವೈದ್ಯ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿರುವ ಬಗ್ಗೆ ಕೇಂದ್ರ ಸರಕಾರದ ಮೇಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ. ರಾಜ್ಯ ಸರಕಾರ ಕೂಡಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಎಚ್.ಡಿ. ಕುಮಾರಸ್ವಾಮಿ, ವೈದ್ಯ ಸೀಟುಗಳ ಹಂಚಿಕೆ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಸರಕಾರಗಳೇ ಮ್ಯಾನೇಜ್‌ಮೆಂಟುಗಳಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು ದೂರಿದ್ದಾರೆ.

ವೈದ್ಯ ಶಿಕ್ಷಣವನ್ನು ಹಳ್ಳಿ ವಿದ್ಯಾರ್ಥಿಗಳಿಗೆ ‘ನೀಟಾಗಿ’ ತಪ್ಪಿಸುವ ಹುನ್ನಾರ ನಡೆಯುತ್ತಿದೆಯಾ? ಎನ್ನುವ ಅನುಮಾನ ಕಾಡುತ್ತಿದೆ. ಕೇಂದ್ರ ಸರಕಾರಕ್ಕೆ ‘ನೀಟ್‌’ ವ್ಯವಸ್ಥೆಯನ್ನು ಹಾಳು ಮಾಡುವ ಬಗ್ಗೆ ಇದ್ದ ಉತ್ಸಾಹ ಸರಿ ಮಾಡಲು ಇಲ್ಲ ಎನ್ನುವುದು ವಿದ್ಯಾರ್ಥಿಗಳಿಗೆ ಮನವರಿಕೆಯಾಗಿದೆ.

‘ಸಮಾನ ಶಿಕ್ಷಣ, ಸಮಾನ ಅವಕಾಶ’ಗಳ ಸಂವಿಧಾನದ ಆಶಯವನ್ನು ಕೇಂದ್ರ ಸರಕಾರ ಗಾಳಿಗೆ ಬಿಟ್ಟಿದೆ. ನಾಲ್ಕು ತಿಂಗಳಿನಿಂದ ವೈದ್ಯ ಸೀಟುಗಳು ಹಂಚಿಕೆಯಾಗಿಲ್ಲ. ಪರಿಣಾಮ ಎಂಜಿನಿಯರಿಂಗ್‌ ಕೌನ್ಸೆಲಿಂಗ್‌ ಕೂಡ ತಡವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸಮರ್ಪಕ ನಿರ್ವಹಣೆ, ಅದಕ್ಷತೆಗೆ ಹಿಡಿದ ಕನ್ನಡಿ ಇದು.

ಉನ್ನತ ಶಿಕ್ಷಣ ಉಳ್ಳವರಿಗೆ ಮಾತ್ರವೇ? ಇದೇ ಸತ್ಯ ಎನ್ನುವಂತೆ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ. ಗುಣಮಟ್ಟದ ಕೋಚಿಂಗ್‌ಪಡೆಯಲು ಶಕ್ತಿ ಇಲ್ಲದ, ಆರ್ಥಿಕವಾಗಿ ದುರ್ಬಲರಾದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯ ಶಿಕ್ಷಣವನ್ನು ಶಾಶ್ವತವಾಗಿ ತಪ್ಪಿಸುವ ದುರಾಲೋಚನೆ ಈ ವಿಳಂಬ ದ್ರೋಹದ ಹಿಂದೆ ಇದೆಯಾ?

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸರಕಾರಗಳು ಅಸಹಾಯತೆಯ ‘ನಾಟಕ’ ಆಡುತ್ತಾ ವಿದ್ಯಾರ್ಥಿ-ಪೋಷಕರನ್ನು ಯಾಮಾರಿಸುತ್ತಿವೆ. ನೀಟ್‌ ವಿಳಂಬದಿಂದ ವೈದ್ಯ, ಎಂಜಿನಿಯರಿಂಗ್‌ ಸೀಟುಗಳ ‘ಕಾಳಸಂತೆ ಬಿಕರಿ’ಗೆ ಸರಕಾರಗಳೇ ಅವಕಾಶ ಮಾಡಿಕೊಟ್ಟಂತೆ ಆಗಿದೆ. ಇದ್ಯಾವ ಸೀಮೆ ಶಿಕ್ಷಣ ನೀತಿ?

ರಾಜ್ಯ ಸರಕಾರ ಕೂಡಲೇ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿ ತ್ವರಿತ ತೀರ್ಪು ನೀಡುವಂತೆ ಮನವಿ ಮಾಡುವುದು ಸೇರಿ, ಕೇಂದ್ರದ ಮೇಲೆ ಒತ್ತಡ ಹೇರಬೇಕು. ಭಾರತವನ್ನು ‘ವಿಶ್ವಗುರು’ ಮಾಡುವ ಉಮೇದಿನಲ್ಲಿರುವ ಕೇಂದ್ರವು, ಗ್ರಾಮೀಣ ವಿದ್ಯಾರ್ಥಿಗಳಿ ಹಿತ ಕಾಯಬೇಕು.

ನೀಟ್‌ ಅವ್ಯವಸ್ಥೆ ಬಗ್ಗೆ ರಾಜ್ಯ ಸರಕಾರವು ನೆರೆ ರಾಜ್ಯಗಳಂತೆ ದನಿಯೆತ್ತಬೇಕು. ಹಾಗೆ ಮಾಡದಿದ್ದರೆ, ಖಾಸಗಿ ವೈದ್ಯ ಕಾಲೇಜುಗಳ ಜೊತೆ ರಾಜ್ಯ ಸರಕಾರ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಜನರು ಭಾವಿಸಬೇಕಾಗುತ್ತದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss