ದಿಗಂತ ವರದಿ ಹುಬ್ಬಳ್ಳಿ:
ಹು-ಧಾ ಮಹಾನಗರದಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿ ಆಗ್ರಹಿಸಿ ನಗರದ ಕೋಪಿಕರ್ ರಸ್ತೆಯಲ್ಲಿ ಸೋಮವಾರ ಹು-ಧಾರವಾಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಣ ಹೋಮ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.
ನಗರದ ಎಲ್ಲ ಪ್ರಮುಖ ರಸ್ತೆಗಳು ತಗ್ಗು ಗುಂಡಿಮಯವಾಗಿದ್ದು, ಕೂಡಲೇ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು. ರಸ್ತೆಯ ಮಧ್ಯದಲ್ಲಿ ಹೋಮ ಕುಂಡ ನಿರ್ಮಿಶಿ, ಇಬ್ಬರು ಅರ್ಚಕರಿಂದ ಮಂತ್ರ ಘೋಷ ಪಟಣ ಮಾಡುವ ಮೂಲಕ ಶಾಸ್ತ್ರೋಕ್ತವಾಗಿ ಗಣಹೋಮ ನೆರವೇರಿಸಿದರು.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಕಳೆದ 15 ವರ್ಷಗಳಿಂದ ಹು-ಧಾ ಮಹಾನಗರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲದೇ ಕೇಂದ್ರದ ಸಂಸದ ಪ್ರಲ್ಹಾದ್ ಜೋಶಿ, ಶಾಸಕ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಈ ಭಾಗದವರೇ ಆಗಿದ್ದಾರೆ ಆದರೆ ಈವರೆಗೆ ನಗರದ ರಸ್ತೆಗಳ ಸುಧಾರಣೆ ಆಗಿಲ್ಲ. ಈ ದಿಸೆಯಲ್ಲಿ ಈಗಾಗಲೇ ರಸ್ತೆ ಸರಿಪಡಿಸಲು ಒತ್ತಾಯಿಸಿ ಗುಂಡಿಗಳಲ್ಲಿ ನಾಟಿ, ಹಡಗು ಬಿಡಲಾಗಿದೆ. ಇದೀಗ ಹಿಂದೂ ಸಂಪ್ರದಾಯದಂತೆ ಗಣ ಹೋಮ ಮೂಲಕ ಗುಂಡಿ ಮತ್ತು ಧೂಳು ಮುಕ್ತ ನಗರವನ್ನಾಗಿ ಮಾಡಲು ಸಂಕಲ್ಪ ಮಾಡಿ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದರು.
ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಹು-ಧಾ ಮಹಾನಗರ ಕಳೆದ ಹಲವಾರು ವರ್ಷಗಳಿಂದ ಗುಂಡಿ, ದೂಳು ನಗರವಾಗಿ ಮಾರ್ಪಟ್ಟಿದ್ದು, ಜನ ನಿತ್ಯ ಸಂಚರಿಸಲು ಹೈರಾಣಾಗುತ್ತಿದ್ದಾರೆ. ಈ ದಿಸೆಯಲ್ಲಿ ನಗರ ಗುಂಡಿ, ದೂಳು ಮುಕ್ತ ಆಗಬೇಕೆಂಬ ಸಂಕಲ್ಪ ಮಾಡಲು ಕಾಂಗ್ರೆಸ್ ಪಕ್ಷದಿಂದ ಗಣಹೋಮ ಮಾಡಲಾಗಿದೆ. ಇನ್ನು ಬಿಜೆಪಿಯವರು ತಿಂಗಳಿಗೊಮ್ಮೆ ಕಾರ್ಯಕಾರಿಣಿ ಸಭೆ, ಇಲ್ಲದೇ ನಾಯಕರ ಮದುವೆ ಆಗುವಂತಾಗಲಿ ಯಾಕೆಂದರೆ ಅವರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಗರದ ರಸ್ತೆಗಳು ಸರಿಯಾಗಬಹುದು ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಸುವರ್ಣಲತಾ ಮಣಿಕುಂಟ್ಲಾ, ಸಂದೀಲ್ ಕುಮಾರ್, ಪಕ್ಷದ ಮುಖಂಡರಾದ ಇಮ್ತಿಯಾಜ್ ಮಣಿಯಾರ್, ಪ್ರಕಾಶ ಕುರಹಟ್ಟಿ ಇದ್ದರು.