Thursday, June 30, 2022

Latest Posts

ಜೀವ ಬೆದರಿಕೆ ಬಂದಿದ್ದರೂ, ಲೆಕ್ಕಿಸದೆ ಚುನಾವಣೆ ಸ್ಪರ್ಧಿಸಿರುವೆ: ಮಲ್ಲಿಕಾರ್ಜುನ ಲೋಣಿ

ಹೊಸ ದಿಗಂತ ವರದಿ ವಿಜಯಪುರ:

ಅವಳಿ ಜಿಲ್ಲೆ ವಿಜಯಪುರ- ಬಾಗಲಕೋಟೆ ವಿಧಾನ ಪರಿಷತ್ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಸೂತ್ರದಡಿ ಅವಿರೋಧ ಆಯ್ಕೆಗೆ ನಡೆಸಿದ್ದ ಹುನ್ನಾರ ತಡೆಯಲು, ಅನೇಕ ಗ್ರಾಪಂ ಸದಸ್ಯರ ಒತ್ತಾಯದ ಮೇರೆಗೆ ಚುನಾವಣೆ ಕಣಕ್ಕೆ ಇಳಿದಿದ್ದೇನೆ. ಕಣದಿಂದ ಹಿಂದೆ ಸರಿಸಲು ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜೀವ ಭಯ ಬಂದಿದ್ದರು, ಅದನ್ನು ಲೆಕ್ಕಿಸದೆ ಚುನಾವಣೆ ಸ್ಪರ್ಧಿಸಿರುವೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಕಣದಿಂದ ಹಿಂದೆ ಸರಿಯಲು ಹೇಳಿದರು. ಬಿಜೆಪಿ ಧುರೀಣರಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಸಹ ಕಣದಿಂದ ಹಿಂದೆ ಸರಿಯಲು ಒತ್ತಾಯಿಸಿದರು. ಆದರೆ ಮತದಾರರ ಒತ್ತಾಸೆ ಮೇರೆಗೆ ಕಣದಲ್ಲಿ ಉಳಿದಿರುವೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ವಾಭಿಮಾನದಿಂದ ಗೆದ್ದು ಬಂದಂತೆ ನಾನೂ ಗೆದ್ದು ಬರುವ ವಿಶ್ವಾಸವಿದೆ. ಯಾವುದೇ ಆದೆ ಆಮಿಷಕ್ಕೆ ಒಳಗಾಗದೇ ಯಾವುದೇ ಅಭ್ಯರ್ಥಿಗೆ ಬೆಂಬಲ ಸೂಚಿಸದೆ ಕಣದಲ್ಲಿದ್ದು ಹೋರಾಡುವೆ ಎಂದರು.

ಅಖಂಡ ವಿಜಯಪುರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗಳ ಅರಿವಿದೆ. ಅವರ ಗೌರವ ಧನ ಹೆಚ್ಚಿಸಲು ಒತ್ತಾಯಿಸಿದ್ದೇನೆ ಎಂದರು.

ಗ್ರಾಪಂ ಸದಸ್ಯರ ಅಧಿಕಾರ ಇಂದು ಮೊಟಕುಗೊಳಿಸಿದ್ದಾರೆ. ಅವರ ಗೌರವ ಧನ ಇನ್ನೂ ಹೆಚ್ಚಿಸಬೇಕಿದೆ. ಮೂಲ ಸೌಕರ್ಯಗಳು ಅವರಿಗೆ ಸಿಗುತ್ತಿಲ್ಲ. ಬಸ್ ಪಾಸ್ ಉಚಿತ ಮಾಡಬೇಕು, ಸದಸ್ಯರ ಕುಟುಂಬಕ್ಕೆ ಆರೋಗ್ಯ ಸೌಲಭ್ಯ ಸಿಗಬೇಕು. ಆ ನಿಟ್ಟಿನಲ್ಲಿ ಶ್ರಮಿಸುವೆ ಎಂದರು.

ಎರಡೂ ರಾಷ್ಟ್ರೀಯ ಪಕ್ಷಗಳು ನನ್ನನ್ನು ಹೆದರಿಸುತ್ತಿದ್ದು, ಹೆಸರು ಕೆಡಿಸುವುದಾಗಿ ನನಗೆ ಹಾಗೂ ನನ್ನ ಕುಟುಂಬದವರಿಗೆ ಹೇಳುತ್ತಿದ್ದಾರೆ. ಬರುವ ದಿನಗಳಲ್ಲಿ ಅದನ್ನೆಲ್ಲ ಬಹಿರಂಗ ಪಡಿಸುವೆ. ಇಂದು ಎಸ್ ಪಿ ಅವರಿಗೆ ಮನವಿ ಕೊಟ್ಟು ಭದ್ರತೆ ಪಡೆಯುವ ವಿಚಾರದಲ್ಲಿದ್ದೇನೆ ಎಂದರು.

ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ನೀಡಿತ್ತು. ಸಿಂದಗಿ ಬೈ ಎಲೆಕ್ಷನ್ ವೇಳೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ಎಂ‌.ಬಿ. ಪಾಟೀಲರ ಕುಟುಂಬದ ಬದಲು ಹೊಸಬರಿಗೆ ಅವಕಾಶ‌ ಕೊಡಿ ಎಂದಾಗ ಎಸ್.ಆರ್. ಪಾಟೀಲರಿಗೆ ಒಂದೇ ಟಿಕೆಟ್ ಕೊಡುವುದಾಗಿ ಹೇಳಿದ್ದರು‌. ನೀನು ಪ್ರಯತ್ನ ಮಾಡಬೇಡ ಎಂದಿದ್ದರು. ಆದರೆ ಎಸ್.ಆರ್. ಪಾಟೀಲರಿಗೆ ಕೊಟ್ಟಿಲ್ಲ ಎಂಬ ನೋವಿದೆ. ಸುನೀಲಗೌಡರಿಗೆ ಕೊಟ್ಟಿದ್ದರಿಂದ ನಾನು ಕಣಕ್ಕೆ ಇಳಿದಿದ್ದೆನೆ. ಎಂ. ಬಿ. ಪಾಟೀಲರು ದೊಡ್ಡವರು ಬೆಳೆದಿದ್ದಾರೆ. ಅವರ ಮನೆಗೆ ಕೊಡೋದರಿಂದ ಮತ್ತೊಬ್ಬರಿಗೆ ಅವಕಾಶ ತಪ್ಪಿದೆ.
ಹೀಗಾಗಿ ಬಹಳಷ್ಟು ಜನರಿಗೆ ಅಸಮಾಧಾನ ಆಗಿದೆ. ಯಾರಿಗೆಲ್ಲ ಅಸಮಾಧಾನ ಇದೆ ಅವರೆಲ್ಲ ನನ್ನ ಜೊತೆಗಿಲ್ಲ. ನಾನು ಪಕ್ಷೇತರ ಅಭ್ಯರ್ಥಿ. ಯಾರನ್ನೂ ನಾನು ಸಂಪರ್ಕ ಸಾಧಿಸಿಲ್ಲ. ಬರುವ ದಿನಗಳಲ್ಲಿ ಎಲ್ಲರನ್ನೂ ಭೇಟಿ ಮಾಡುವೆ ಎಂದರು.

ನನಗೆ ಯಾವುದೇ ರಾಷ್ಟ್ರೀಯ ಪಕ್ಷದ ಮುಖಂಡರು ಬೆಂಬಲ ಸೂಚಿಸಿಲ್ಲ. ಗ್ರಾಮ ಪಂಚಾಯಿತಿ‌ ಸದಸ್ಯ ಮತದಾರರು ಅಗಾಧ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಎರಡೂ ರಾಷ್ಟ್ರೀಯ ಪಕ್ಷಗಳ ಬಳಿ ಹಣ ಬಲ, ಕಾರ್ಯಕರ್ತರ ಬಲ ಇದೆ. ಆದರೆ ನನಗೆ ಮತದಾರರ ಬಲ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಪ್ರಬಲ ಪೈಪೋಟಿದಾರರೇ ಆಗಿದ್ದಾರೆ ಎಂದರು.

ಹಾಲುಮತ ಸಮಾಜದ ಮುಖಂಡ ಬೀರಪ್ಪ ಪೂಜಾರಿ, ಎಂ.ಎಸ್. ಪಠಾಣ, ರಾಜುಗೌಡ ಪಾಟೀಲ, ಜಾಕೀರ ಮುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss