Tuesday, July 5, 2022

Latest Posts

ಅಕಾಲಿಕ ಮಳೆಯಿಂದ ಬೆಳೆಗಳ ನಾಶ: ಹಸೆ ‘ಬರ’ ಘೋಷಿಸಲು ಒತ್ತಾಯ

ಹೊಸ ದಿಗಂತ ವರದಿ,ಬಳ್ಳಾರಿ:

ಮಳೆ ಕೊರತೆ ಹಿನ್ನೆಲೆ ಬರ ಪೀಡಿತ ಜಿಲ್ಲೆ ಎನ್ನುವ ಘೋಷಣೆಯಂತೆ, ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದ ಎಲ್ಲ ಬೆಳೆಗಳು ನಾಶವಾಗಿದ್ದು, ಸರ್ಕಾರ ಹಸೆ ‘ಬರ’ ಎಂದು ಘೋಷಿಸಿ ಪರಿಹಾರ ಸೇರಿ ಅಗತ್ಯ ಕ್ರಮಗಳನ್ನು ಕೈಗೋಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕರೂರು ಆರ್.ಮಾಧವ ರೆಡ್ಡಿ ಅವರು ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದ ‌ಭತ್ತ, ಮೆಣಸಿನಕಾಯಿ, ಮೆಕ್ಕೆಜೋಳ ಸೇರಿದಂತೆ ‌ನಾನಾ‌ ಬೆಳೆಗಳು‌ ನಾಶವಾಗಿವೆ, ಇದರ ಜೊತೆಗೆ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಸರ್ಕಾರ ಕೂಡಲೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಉಭಯ ಜಿಲ್ಲೆಗಳಲ್ಲಿ 3ಲಕ್ಷ ಎಕರೆ ಭತ್ತ ಹಾಗೂ 2.5 ಲಕ್ಷ ಎಕರೆ ಮೆಣಸಿನಕಾಯಿ ಬೆಳೆಗಳನ್ನು ರೈತರು ಬೆಳೆದಿದ್ದು, ಅದರಲ್ಲೂ ವಿಶೇಷವಾಗಿ ಭತ್ತ ಕೊಯ್ಲುಗೆ ಬಂದಾಗ ಈ ಅಕಾಲಿಕ ಮಳೆ ರೈತರ ಜೀವನವನ್ನು ‌ಮೂರಾಬಟ್ಟೆ ಮಾಡಿದೆ. ಈ ಬಾರಿ ಸೋನಾ ಮಸೂರಿಗಿಂತ ಆರ್ ಎನ್ ಆರ್ ಭತ್ತವನ್ನೇ ಹೆಚ್ಚು ಬೆಳೆದಿದ್ದು, 1.5ಲಕ್ಷ ಎಕರೆ ಭತ್ತದ ಜಮೀನಿನಲ್ಲಿ 2 ಇಂಚಿನಷ್ಟು ನೀರು ನಿಂತಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ. ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಮೆಣಸಿನಕಾಯಿ ‌ಬೆಳೆಯುವ ನಮ್ಮ ಪ್ರದೇಶದಲ್ಲಿ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಕೂಡಲೇ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ವಿತರಿಸಬೇಕು, ಪ್ರತಿ ಎಕರೆ ಮೆಣಸಿನಕಾಯಿ ಬೆಳೆಗೆ ನಮ್ಮ ರೈತರು 70ಸಾವಿರ ರೂ.ಖರ್ಚು ಮಾಡಿದ್ದು, ಇತ್ತೀಚೆಗೆ ಸರ್ಕಾರ ಪ್ರತಿ ರೈತರಿಗೆ 6 ಸಾವಿರ 10 ಸಾವಿರ ರೂ. ಗಳಂತೆ ಜಮಾ ಮಾಡಿರುವುದು‌ ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ವೆ ನಡೆಸುವ ಅಧಿಕಾರಿಗಳಿಗೆ‌ ಕನಿಷ್ಟ ಜ್ಞಾನ ಬೇಡವೇ, ಸರ್ಕಾರ ತಪ್ಪು ವರದಿ ನೀಡಿದ್ದಾರೆ, ಈಗಾಗಲೇ ಉಭಯ ಜಿಲ್ಲೆಗಳಲ್ಲಿ ಕಳೆದ ಹತ್ತಿ ದಿನಗಳಲ್ಲಿ ‌ಮೂವರು ರೈತರು ಸಾಲ ಬಾದೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ, ಕೂಡಲೇ ಸರ್ಕಾರ ಸೂಕ್ತ ಪರಿಹಾರ ನೀಡಲು ‌ಮುಂದಾಗಬೇಕು ನಿರ್ಲಕ್ಷಿಸಿದರೇ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

ಡಿ.16 ರಂದು ಬೃಹತ್ ಪ್ರತಿಭಟನೆ: ಅಕಾಲಿಕ ಮಳೆಯಿಂದ ಭತ್ತ, ಮೆಣಸಿನಕಾಯಿ ಸೇರಿ ನಾನಾ ಬೆಳೆಗಳು ನಾಶವಾಗಿದ್ದು, ಸೂಕ್ತ ಪರಿಹಾರ ನೀಡಬೇಕು, ಎಲ್ಲ ರೈತರ ಬ್ಯಾಂಕ್ ಸಾಲವನ್ನು‌ ಮನ್ನಾ ಮಾಡಿ, ಹೊಸ ಸಾಲ ವಿತರಿಸಬೇಕು ಎಂದು ಒತ್ತಾಯಿಸಿ ಡಿ.16 ಎಂದು‌ ನಗರದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಗರದ ಕಾಗೆ ಪಾರ್ಕ್‌ ಮೂಲಕ ‌ಮೆರವಣಿಗೆ‌ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಡಿಸಿ ಅವರ ಮೂಲಕ ಸರ್ಕಾರಕ್ಕೆ‌ ಮನವಿ ಸಲ್ಲಿಸಲಾಗುವುದು. ಪ್ರತಿಯೋಬ್ಬ ರೈತರು ಈ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ‌ ಮಾಡಿದರು. ಅದಿಕಾರಿಗಳು ಸರ್ಕಾರಕ್ಕೆ ನೀಡಿದ ತಪ್ಪು ಲೆಕ್ಕ ಹಾಗೂ ಜಿಪಿಎಸ್ ಪದ್ದತಿ ಅನುಷ್ಠಾನ ಕಾರ್ಯ ಅಧಿಕಾರಿಗಳಿಂದ‌ವಿ ಫಲವಾದ ಹಿನ್ನೆಲೆಯಲ್ಲಿ ರೈತರ ಬವಣೆ ಕೇಳುವವರಿಲ್ಲವಾಗಿದೆ. ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮೇಲಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ಸೂಕ್ತ ಪರಿಹಾರಕ್ಕೆ ಅಗತ್ಯ‌ ಕ್ರಮ ಕೈಗೊಳ್ಳಬೇಕಿತ್ತು, ಆದರೇ, ಇಲ್ಲಿ ವರೆಗೂ ಈ ಕೆಲಸ ನಡೆದಿಲ್ಲ, ಎಂದು ಕಿಡಿ ಕಾರಿದರು. ಸಿರಗುಪ್ಪ ತಾಲೂಕಿನ ನಿಟ್ಟೂರು ಬಳಿ‌ಯ ತುಂಗಭದ್ರ ನದಿ‌ ಪಾತ್ರದ ನಡುಗಡ್ಡೆಯಲ್ಲಿ ಸುಮಾರು 265 ಎಕರೆ ಭತ್ತವನ್ನು ನಮ್ಮ‌ರೈತರು ಬೆಳೆದಿದ್ದಾರೆ. ಜಮೀನಿಗೆ ತೆರಳಬೇಕಾದರೇ ಹರಗೋಲು‌ ಮೂಲಕವೇ ತೆರಬೇಕು, ಅದರಲ್ಲೇ ಬರಬೇಕಾದ ಸ್ಥಿತಿ ಇದೆ. ಭತ್ತ ಕಟಾವು ಹಂತಕ್ಕೆ ಬಂದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಈ ಕುರಿತು ಜಿಲ್ಲಾಡಳಿತದ ಗಮನಕ್ಕಿದ್ದು, ಆದರೂ ಇಲ್ಲಿವರೆಗೂ ಯಾವುದೇ ಕ್ರಮವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಸವರಾಜ್ ಸ್ವಾಮೀ, ಬಸರೆಡ್ಡಿ, ಹುಲಗಯ್ಯ, ಗುಂಡಾರೆಡ್ಡಿ, ಸಲೀಂ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss