Friday, July 1, 2022

Latest Posts

ಭೂಮಿ ಹಾಳು ಮಾಡುವುದು ವಿಕಾಸವಲ್ಲ, ವಿನಾಶ: ಚಿಂತಕ ಕೆ.ಎನ್.ಗೋವಿಂದಾಚಾರ್ಯ

ಹೊಸದಿಗಂತ ವರದಿ, ಕಲಬುರಗಿ:

ಪ್ರಪಂಚ ವಿಚಿತ್ರ ಅಭಿವೃದ್ಧಿ ಕಡೆಗೆ ಸಾಗುತ್ತಿದೆ.ಸ್ವಾರ್ಥಕ್ಕಾಗಿ ಭೂಮಿ ಹಾಳು ಮಾಡುವುದು ವಿಕಾಸ ಅಲ್ಲ. ಅದು, ವಿನಾಶದ ಕಡೆಗೆ ಹೋದಂತೆ ಆಗಲಿದೆ. ಹೀಗಾಗಿ ಪ್ರಕೃತಿ ಸಹಜವಾಗಿರುವುದು ಮರೆಯಬಾರದು ಎಂದು ಭಾರತ ವಿಕಾಸ ಸಂಗಮ ಸಂಸ್ಥಾಪಕರಾದ ಖ್ಯಾತ ಚಿಂತಕ ಕೆ.ಎನ್.ಗೋವಿಂದಾಚಾರ್ಯ ಹೇಳಿದರು.
ಕೊತ್ತಲ ಬಸವೇಶ್ವರ ಭಾರತೀಯ ವಿದ್ಯಾ ಸಂಸ್ಥೆ ಮತ್ತು ಭಾರತ ವಿಕಾಸ ಸಂಗಮ ಸಹಯೋಗದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರದಿಂದ ಆರಂಭಗೊಂಡ ಎರಡು ದಿನಗಳ `ಸೃಜನ ಶಕ್ತಿ ಸಂಗಮ-8′ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ,ದೇಶ ವಿಕಾಸ ಹೊಂದಲು ಜಲ, ಜಂಗಲ್,ಜಮೀನು ಮತ್ತು ಜಾನುವಾರು ಈ ಎಲ್ಲವುಗಳ ಪ್ರಗತಿ ಸೂತ್ರ ಪಾಲಿಸಿಕೊಂಡು ಹೋಗಬೇಕು. ಆದರೆ, ಅದನ್ನು ನಿರ್ಲಕ್ಷಿಸಿ,ಬರಿ ಅರ್ಥಿಕ ಬೆಳವಣಿಗೆಗೆ ಆದ್ಯತೆ ನೀಡುತ್ತಿದ್ದೇವೆ. ಪ್ರಕೃತಿ ವಿರುದ್ಧ ನಡೆದುಕೊಂಡರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಪ್ರಕೃತಿಗೆ ವಿರುದ್ಧವಾಗಿ ಜೀವಿಸುವ ಮತ್ತು ತನ್ನ ಸ್ವಾರ್ಥಕ್ಕಾಗಿ ಭೂಮಿ, ಪರಿಸರ ಹಾಳುವ ಮಾಡುವ ಏಕೈಕ ಜೀವಿ ಮನುಷ್ಯ. ಭೂಮಿಯ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡಿಕೊಂಡು ಬರುತ್ತಿರುತ್ತೇವೆ. ಭೂಮಿ ತಾಯಿ ಹಲವು ಸಲ ವಿಕೋಪಗಳ ಮೂಲಕ ಸುಧಾರಿಸಿಕೊಳ್ಳುವಂತೆ ಎಚ್ಚರಿಕೆ ನೀಡುತ್ತಿದ್ದರೂ, ಮನುಷ್ಯ ಕ್ಯಾರೆ ಎನ್ನುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ 500 ವರ್ಷಗಳಲ್ಲಿ ಕಂಡ ಪ್ರಗತಿ ಈಚಿನ 50 ವರ್ಷಗಲ್ಲಿ ಕಂಡಿರಬಹುದು, 300 ವರ್ಷಗಳ ಪ್ರಗತಿ ವೇಗ, ಈಚಿನ 30 ವರ್ಷಗಳಲ್ಲಿ ಆಗಿದೆ. ಆದರೆ, ಇದ್ಯಾವುದು ಸಕಾರಾತ್ಮಕ ಪ್ರಗತಿಯಲ್ಲ. ಅಸಮತೋಲನ ಬೆಳವಣಿಗೆಯಾಗಿದೆ. ಮಾನವನ ಅಭಿವೃದ್ಧಿಗೆ ಪ್ರಕೃತಿ ಬಲಿಕೊಡುವುದು ಸರಿಯಲ್ಲ. ಪ್ರಪಂಚದ ಪ್ರಗತಿ ದೃಷ್ಟಿಕೋನ ವಿಚಿತ್ರವಾಗಿ ಹೋಗುತ್ತಿದೆ ಇದು ಮುಂದಿನ ದಿನಗಳಲ್ಲಿ ಮಾನವ ಸಂಕುಲಕ್ಕೆ ಅಪಾಯ ತಂದಿಡಲಿದೆ ಎಂದು ಗೋವಿಂದಾಚಾರ್ಯರು ಸೂಚ್ಯವಾಗಿ ತಿಳಿಸಿದರು.
ಚಾಣಕ್ಯ ಹೇಳಿದ ವಿಕಾಸ ಸೂತ್ರ ಮನುಷ್ಯನ ಚಿತ್ತದಿಂದ ರಾಜ್ಯ, ಧರ್ಮ, ಸುಖ, ಅರ್ಥ ಎಂದು ಹೇಳಿದ್ದಾರೆ. ಆದರೆ, ಮೊದಲ ಹೇಳಿರುವ ಚಿತ್ತ ಆತ್ಮಶಾಂತಿ ನೆಮ್ಮದಿ ಬಿಟ್ಟು, ನಾವು ಕೊನೆಯ ಪದದಿಂದ ಹೊರಟಿ . ಆರ್ಥಿಕ ಬೆಳವಣಿಗೆಯೇ ಎಲ್ಲ ಎಂದುಕೊಂಡು ನಡೆದುಕೊಳ್ಳುತ್ತಿರುವುದು ಅಪಾಯಕಾರಿಯಾಗಿದೆ ಎಂದು ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಮಾತೋಶ್ರೀ ದಾಕಾಯಿಣಿ ಅಪ್ಪ ಉದ್ಘಾಟಿಸಿದರು. ಸ್ವಾತಿ ಜೋಶಿ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಸುರೇಶಚಂದ್ರ ಅಗ್ನಿಹೋತ್ರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಪೂಜ್ಯ ಶಿವಕುಮಾರ ಸ್ವಾಮೀಜಿ, ಪೂಜ್ಯ ಸದಾಶಿವ ಸ್ವಾಮೀಜಿ, ಕೆ.ಎನ್.ಗೋವಿಂದಾಚಾರ್ಯ, ಬಸವರಾಜ ಪಾಟೀಲ್ ಸೇಡಂ, ರವೀಂದ್ರ ಧಾರಿಯಾ, ಮಾಧವ ರೆಡ್ಡಿ, ಸುರೇಶಚಂದ್ರ ಅಗ್ನಿಹೋತ್ರಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss