ಕಾಫಿ ತೋಟದೊಳಗೆ ಅಸ್ವಸ್ಥ ಮರಿಯಾನೆ ಪತ್ತೆ: ಅರಣ್ಯ ಇಲಾಖೆಯಿಂದ‌ ಚಿಕಿತ್ಸೆ

ಹೊಸದಿಗಂತ ವರದಿ,ಕುಶಾಲನಗರ:

ಅನಾರೋಗ್ಯಕ್ಕೆ ಒಳಗಾದ ಕಾಡಾನೆ ಮರಿಯೊಂದು ಕಾಫಿ‌ ತೋಟದೊಳಗೆ ಮೇಲೇಳಲಾಗದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಂಜರಾಯಪಟ್ಟಣ ಗ್ರಾ.ಪಂ‌. ವ್ಯಾಪ್ತಿಯ ದಾಸವಾಳ ಗ್ರಾಮದ ಖಾಸಗಿ ಕಾಫಿ ತೋಟದಲ್ಲಿ 8 ವರ್ಷ ಪ್ರಾಯದ ಹೆಣ್ಣಾನೆ ಅಸ್ವಸ್ಥತೆಯಿಂದ ಬಳಲುತ್ತಿದ್ದು ಮೇಲೇಳಲಾಗದ ಸ್ಥಿತಿಯಲ್ಲಿ ಗೋಚರಿಸಿದೆ.
ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಮತ್ತು ತಂಡ ದುಬಾರೆಯ 4 ಸಾಕಾನೆಗಳನ್ನು ಬಳಸಿಕೊಂಡು‌‌ ಕೆಳಗೆ ಬಿದ್ದಿರುವ ಮರಿಯನ್ನು ಮೇಲೆತ್ತಲು ಯತ್ನಿಸಿದರೂ ಫಲ ಕಾಣಲಿಲ್ಲ. ಹಿಂಬದಿ ಕಾಲುಗಳು ನಿತ್ರಾಣಗೊಂಡ ಸ್ಥಿತಿಯಲ್ಲಿರುವ ಕಾರಣ ವನ್ಯಜೀವಿ ತಜ್ಞ ಡಾ.ಚಿಟ್ಟಿಯಪ್ಪ ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ.
ಆನೆಯ ಮೇಲ್ಮೈಯಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ.‌ ದೇಹದೊಳಗೆ ಸೋಂಕಿನ‌ ಕಾರಣದಿಂದ ಈ ರೀತಿ ಅಸ್ವಸ್ಥತೆ ಉಂಟಾಗಿರಬಹುದೆಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಮರಿಯಾನೆ ತೋಟದಲ್ಲಿ ಬಾಕಿಯಾದ ಕಾರಣ ಕಾಡಾನೆಗಳ‌‌ ಹಿಂಡು ಈ‌ ಭಾಗದಲ್ಲಿ ದಾಂಧಲೆ‌ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಫಸಲು ನಾಶಗೊಳಿಸಿದೆ. ಕಾಫಿ, ಅಡಿಕೆ ಸೇರಿದಂತೆ ಇನ್ನಿತರೆ ಬೆಳೆಗಳು ಅಪಾರ ಪ್ರಮಾಣದಲ್ಲಿ‌ ನಾಶವಾಗಿದೆ.
ಈ ಭಾಗದಲ್ಲಿ ಕಾಡಾನೆ ಹಾವಳಿ‌ ನಿರಂತರವಾಗಿದ್ದು ಆನೆ ಹಾವಳಿ ತಡೆಗಟ್ಟಲು ಸೂಕ್ತ ಯೋಜನೆ ಜಾರಿಗೊಳಿಸಬೇಕೆಂದು ನಂಜರಾಯಪಟ್ಟಣ ಗ್ರಾ.ಪಂ‌. ಅಧ್ಯಕ್ಷ ಸಿ.ಎಲ್.ವಿಶ್ವ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!