ಹೊಸ ದಿಗಂತ ವರದಿ, ಕಾಸರಗೋಡು:
ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಯು ಸಿಪಿಎಂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಗೆಲುವು ಒಂದೇ ಉದ್ದೇಶವಿರಿಸಿ ಪಕ್ಷಗಳ ನೇತೃತ್ವವು ನಿರ್ಧಾರ ಕೈಗೊಳ್ಳುವಾಗ ಕಾರ್ಯಕರ್ತರಲ್ಲಿ ಅಭ್ಯರ್ಥಿಗಳ ಬಗ್ಗೆ ಅಸಮಾಧಾನಗಳು ಭುಗಿಲೆದ್ದು , ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ಕೂಡ ನಡೆಯುತ್ತಿವೆ.
ಇದೀಗ ಸಿಪಿಎಂ ಅಭ್ಯರ್ಥಿಗಳ ನಿರ್ಣಯ ವಿಚಾರದಲ್ಲಿ ವಿವಿಧ ಜಿಲ್ಲೆಗಳಲ್ಲಿ ಭಾರೀ ಭಿನ್ನಮತ ಸ್ಟಷ್ಟಿಯಾಗಿದೆ. ಆದರೆ ಇದು ಸ್ವಾಭಾವಿಕ ಎಂದು ಸಿಪಿಎಂನ ಕೇಂದ್ರ ಸಮಿತಿ ಸದಸ್ಯ ಎಂ.ವಿ.ಗೋವಿಂದನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ. ಅಭ್ಯರ್ಥಿಗಳ ನಿರ್ಣಯದ ಬಗ್ಗೆ ಪೊನ್ನಾನಿ ಮಂಡಲದಲ್ಲಿ ಸಿಪಿಎಂ ನಾಯಕತ್ವದ ವಿರುದ್ಧ ಮಹಿಳೆಯರು ಸಹಿತ ನೂರಾರು ಮಂದಿ ಮಂಗಳವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಅಲ್ಲದೆ ಈ ಮಂಡಲದ 7 ಮಂದಿ ಬ್ರಾಂಚ್ ಕಾರ್ಯದರ್ಶಿಗಳು, 3 ಮಂದಿ ಲೋಕಲ್ ಸಮಿತಿ ಸದಸ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಸಿಪಿಎಂ ನಾಯಕತ್ವದ ವಿರುದ್ದ ಸಿಡಿದೆದ್ದಿದ್ದಾರೆ. ಪೊನ್ನಾನಿ ಅಲ್ಲದೆ ಕುಟ್ಯಾಡಿ, ವಡಗರ, ಕಣ್ಣೂರು, ನಾದಾಪುರ ಮುಂತಾದ ಮಂಡಲಗಳಲ್ಲೂ ಸಿಪಿಎಂ ಅಭ್ಯರ್ಥಿಗಳ ವಿರುದ್ಧ ಅವರದ್ದೇ ಪಕ್ಷದ ಕಾರ್ಯಕರ್ತರು ಪ್ರಬಲ ಪ್ರತಿಭಟನೆ ನಡೆಸುತ್ತಿದ್ದಾರೆ.
ಅಭ್ಯರ್ಥಿ ಆಯ್ಕೆ ವಿರುದ್ಧ ಮಂಜೇಶ್ವರದಲ್ಲೂ ಭಿನ್ನಮತ ಸ್ಪೋಟ
ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಿಂದ ಸ್ಪರ್ಧಿಸಲು ಪಕ್ಷವು ನಿರ್ದೇಶಿಸಿದ ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್.ಜಯಾನಂದರ ವಿರುದ್ಧ ಕಾರ್ಯಕರ್ತರು ಉಪ್ಪಳದಲ್ಲಿ ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಿದ್ದಾರೆ. ಉಪ್ಪಳ ಬಸ್ ನಿಲ್ದಾಣದ ಶೌಚಾಲಯ ಪರಿಸರದಲ್ಲಿ ಮಂಗಳವಾರ ದಿಢೀರನೆ ಪೋಸ್ಟರ್ಗಳು ಪ್ರತ್ಯಕ್ಷಗೊಂಡಿವೆ. ಮಂಡಲದ ವಿವಿಧ ಪಂಚಾಯತ್ಗಳಲ್ಲೂ ಕೆ.ಆರ್.ಜಯಾನಂದರ ವಿರುದ್ಧ ಪೋಸ್ಟರ್ ಲಗತ್ತಿಸಲಾಗಿದೆ. ಮಂಜೇಶ್ವರದಲ್ಲಿ ಕೆ.ಆರ್.ಜಯಾನಂದ ಬೇಡ ಎಂಬುದಾಗಿ ಕನ್ನಡ ಮತ್ತು ಮಲೆಯಾಳದಲ್ಲಿ ಬರೆಯಲಾದ ಪೋಸ್ಟರ್ಗಳು ಕಂಡು ಬಂದಿವೆ.
ಇದೇ ವೇಳೆ ಕಳೆದ 3 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಕೆ.ಆರ್.ಜಯಾನಂದರ ಹೆಸರು ಕೇಳಿ ಬಂದಿತ್ತು. ಆದರೆ ಕಾರ್ಯಕರ್ತರ ವಿರೋಧದ ನಡುವೆಯೂ ಈ ಬಾರಿ ಅವರನ್ನೇ ಅಭ್ಯರ್ಥಿಯನ್ನಾಗಿಸಿ ಸಿಪಿಎಂ ನೇತೃತ್ವವು ಅಂತಿಮ ತೀರ್ಮಾನ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಸಿಪಿಎಂ ನೇತಾರ, ಕಾಸರಗೋಡು ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ಡಾ.ವಿ.ಪಿ.ಪಿ.ಮುಸ್ತಾಫ ಅವರನ್ನು ಮಂಜೇಶ್ವರದಲ್ಲಿ ಎಡರಂಗದ ಅಭ್ಯರ್ಥಿಯನ್ನಾಗಿಸಬೇಕೆಂದು ಆಗ್ರಹಿಸಿ ಸಿಪಿಎಂನ ಅನೇಕ ಮಂದಿ ಕಾರ್ಯಕರ್ತರು ರಂಗಕ್ಕಿಳಿದಿದ್ದಾರೆ.