ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಕಾನ್ಪುರ ಹಾಗೂ ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ರೈಲ್ವೆ ಹಳಿಯಲ್ಲಿ ಡಿಟೊನೇಟರ್‌ಗಳು ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ತನಿಖೆ ಚುರುಕುಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಉದ್ಯೋಗಿಯನ್ನು ಬಂಧಿಸಿದ್ದಾರೆ.
ಬುರ್ಹಾನ್‌ಪುರದ ರೈಲ್ವೆ ಟ್ರ್ಯಾಕ್‌ನ ಮೇಲೆ 10 ಡಿಟೊನೇಟರ್‌ಗಳನ್ನು ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಉದ್ಯೋಗಿ ಶಬೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರೈಲ್ವೆ ಉದ್ಯೋಗಿಯಾಗಿರುವ ಈತನ ಈ ಕೃತ್ಯವೂ ಯಾವ ಉದ್ದೇಶಕ್ಕೆ ನಡೆಸಿದ್ದಾನೆ ಎಂದು ಎನ್‌ಐಎ,ಎಟಿಎಸ್, ಆರ್‌ಪಿಎಫ್ ಪೊಲೀಸರು ಹಾಗೂ ರೈಲ್ವೆ ಸಚಿವಾಲಯದವರು ತನಿಖೆ ನಡೆಸುತ್ತಿದ್ದಾರೆ.
ಬುರ್ಹಾನ್‌ಪುರದ ನೇಪಾನಗರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಸಗ್ಫಾತ ಎಂಬ ಜಾಗದಲ್ಲಿ ನಿನ್ನೆ ಈ ಘಟನೆ ನಡೆದಿತ್ತು.
ಮೊನ್ನೆ ಸೆಪ್ಟೆಂಬರ್ 18 ರಂದು ಯೋಧರನ್ನು ಹೊಂದಿದ್ದ ಜಮ್ಮು ಕಾಶ್ಮೀರದಿಂದ ಕರ್ನಾಟಕಕ್ಕೆ ಹೋಗುತ್ತಿದ್ದ ಸೇನೆಯ ವಿಶೇಷ ರೈಲು ಈ ಟ್ರ್ಯಾಕ್‌ನಲ್ಲಿ ಸಾಗುವ ವೇಳೆ ಸ್ಫೋಟವೊಂದು ಸಂಭವಿಸಿತ್ತು. ಆದರೆ ಇದಕ್ಕೂ ಮೊದಲೇ ಲೋಕೋ ಪೈಲಟ್ ರೈಲು ನಿಲ್ಲಿಸಿ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿ ಹೋಗಿತ್ತು.
ಇದಾದ ನಂತರ ಎಟಿಎಸ್, ಎನ್‌ಐಎ, ರೈಲ್ವೆ, ಲೋಕೋ ಪೊಲೀಸ್ ಸೇರಿದಂತೆ ಇತರ ತನಿಖಾ ಏಜೆನ್ಸಿಗಳು ಈಗ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿವೆ. ಸೇನೆಯ ಅಧಿಕಾರಿಗಳು ಕೂಡ ಈ ತನಿಖೆಯಲ್ಲಿ ಭಾಗಿಯಾಗಿದ್ದು, ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಕೂಡ ಕೆಲ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.