‘ಅಶ್ವತ್ಥನಾರಾಯಣರೇ ದೇವೇಗೌಡರನ್ನು ಖುದ್ದು ಆಹ್ವಾನಿಸಿದ್ದರೂ ಜೆಡಿಎಸ್ ನಿಂದ ಪ್ರತಿಮೆ ರಾಜಕೀಯ’

ಹೊಸದಿಗಂತ ವರದಿ ಮಂಡ್ಯ :

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಭಾಗವಹಿಸುವಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಖುದ್ದು ಭೇಟಿ ಮಾಡಿದ ಸಿ.ಎನ್. ಅಶ್ವತ್ಥನಾರಾಯಣ ಅಹ್ವಾನಿಸಿದ್ದರೂ ಸಹ ಜೆಡಿಎಸ್ ಇಲ್ಲದ ಪುತ್ಥಳಿ ರಾಜಕೀಯ ಮಾಡುತ್ತಿದೆ ಜಿಲ್ಲಾ ಬಿಜೆಪಿ ಆರೋಪಿಸಿದೆ.

ಸಚಿವರಾದ ಸಿ.ಎನ್. ಅಶ್ವತ್ಥನಾರಾಯ ಅವರು ಅ. 19ರಂದು ದೇವೇಗೌಡರ ನಿವಾಸಕ್ಕೆ ತೆರಳಿ ಗೌಡರನ್ನು ಭೇಟಿ ಮಾಡಿ ಅ. 21ರಂದು ಮೃತ್ತಿಕೆ ಸಂಗ್ರಹ ಅಭಿಯಾನ ಚಾಲನೆ ಹಾಗೂ ನ. 11ರ ಪುತ್ಥಳಿ ಅನಾವರಣ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನ ನೀಡಲಾಗಿದೆ. ಆದರೆ ಇದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಲ್ಲಗೆಳೆಯುತ್ತಿರುವುದು ವಿಷಾದನೀಯ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಸಿ.ಟಿ. ಮಂಜುನಾಥ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರಮೋದಿಯವರು ಸಹ ಹಿರಿಯ ಮುತ್ಸದ್ದಿ ರಾಜಕಾರಣಿ ದೇವೇಗೌಡರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಾರೆ. ಪ್ರಧಾನಿಯೇ ಇಂತಹ ಧೋರಣೆ ಅನುಸರಿಸುತ್ತಿರುವುದನ್ನು ಮನಗಂಡಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ದೇವೇಗೌಡರನ್ನು ಆಹ್ವಾನಿಸಿದೆ. ಜೆಡಿಎಸ್‌ನವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಒಕ್ಕಲಿಗರ ಬಗ್ಗೆ ಸದಾ ಕಾಳಜಿ ತೋರುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಅಶ್ವತ್ಥನಾರಾಯಣ, ಅಶೋಕ್ ಅವರನ್ನು ಕಳುಹಿಸಿ ಆಹ್ವಾನಿಸಿದ್ದಾರೆ, ಇಷ್ಟಾದರೂ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ದೇವೇಗೌಡರಿಗೆ ಆಹ್ವಾನ ನೀಡಿಲ್ಲ ಎನ್ನುವುದಾದರೆ ಕುಮಾರಸ್ವಾಮಿಯವರು ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ, ದೇವೇಗೌಡರೇ ಈ ಬಗ್ಗೆ ಹೇಳಿಕೆ ನೀಡಲಿ, ಅದು ಬಿಟ್ಟು ಚುನಾವಣಾ ಸಂದರ್ಭವನ್ನು ಬಳಸಿಕೊಂಡಿರುವ ಜೆಡಿಎಸ್ ಮತರಾಜಕೀಯದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ಒಕ್ಕಲಿಗರ ಮತಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್, ಒಕ್ಕಲಿಗರ ಮಠವನ್ನು ಒಡೆದು ವಿಶ್ವಒಕ್ಕಲಿಗರ ಪೀಠವನ್ನು ಸ್ಥಾಪಿಸಿದ್ದಾದರೂ ಏಕೆ ಎಂದು ಪ್ರಶ್ನಿಸಿದ ಅವರು, ಈ ಸಮುದಾಯದ ಇಬ್ಬರು ಮಠಾಧೀಶರು ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದರೂ ಇಲ್ಲದ ಆರೋಪ ಮಾಡುವುದು ಜೆಡಿಎಸ್‌ಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!