ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………
ಹೊಸದಿಗಂತ ವರದಿ,ಚಿತ್ರದುರ್ಗ:
ಸರ್ಕಾರ ಶಿಕ್ಷಣ ಮತ್ತು ಸಾರಿಗೆ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಪ್ರಯೋಜನ ಪಡೆದು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕರೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಕುರುಮರಡಿಕರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಸಿ.ಸಿ. ರಸ್ತೆ ಉದ್ಘಾಟನೆ ಹಾಗೂ ಡಿ.ಎಂ.ಎಫ್. ಅನುದಾನದಡಿ ೩೨ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸೋಮವಾರ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಸರ್ಕಾರ ಕೋವಿಡ್-೧೯ ಹಿನ್ನೆಲೆಯಲ್ಲಿ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದೆಂಬ ಕಾರಣದಿಂದ ವಿವಿಧ ತಂತ್ರಜ್ಞಾನವನ್ನು ಬಳಕೆ ಮಾಡಿ ಮಕ್ಕಳಿಗೆ ಬೋಧನೆ ಮಾಡಿಸಲು ಪ್ರಯತ್ನ ಮಾಡುತ್ತಿದೆ. ಇದರ ಬಗ್ಗೆ ತಿಳಿದು ಪೋಷಕರು ಮಕ್ಕಳ ಕಲಿಕೆಗೆ ನೆರವಾಗಬೇಕಿದೆ. ಶಿಕ್ಷಣ ಇದ್ದರೆ ಮಾತ್ರ ಜೀವನದಲ್ಲಿ ಮುಂದೆ ಪ್ರಗತಿಯನ್ನು ಹೊಂದಲು ಸಾಧ್ಯವಿದೆ. ಸರ್ಕಾರವೂ ಸಹ ಮಕ್ಕಳ ಆರೋಗ್ಯದ ಬಗ್ಗೆ ಗಮನ ನೀಡಿ, ಈ ರೀತಿಯಾದ ತಯಾರಿ ನಡೆಸಿದೆ. ಎಲ್ಲರೂ ಇದಕ್ಕೆ ಸಹಕಾರ ನೀಡಬೇಕಿದೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ಇದ್ದರೆ, ತಾವು ಬೆಳೆದ ಬೆಳೆಗಳಾಗಲಿ, ಹೂವು ಮತ್ತಿತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಧಿಸಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವೂ ಸಹ ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಿಕೊಡುತ್ತಿದೆ. ಇವುಗಳನ್ನು ಹಾಳು ಮಾಡದೆ ಸರಿಯಾದ ರೀತಿಯಲ್ಲಿ ಪ್ರಯೋಜನ ಪಡೆಯರಿ ಎಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಗೊಡಬನಹಾಳ್ ಗ್ರಾಮದಲ್ಲಿ ೫೦ ಲಕ್ಷ ರೂ. ಡಿಎಂಎಫ್ ಅನುದಾನದಲ್ಲಿ ರಸ್ತೆ, ಜಂಪಣ್ಣನಹಟ್ಟಿ ಗ್ರಾಮದಲ್ಲಿ ೨೫ ಲಕ್ಷ ರೂ., ವೆಚ್ಚದಲ್ಲಿ ಸಿ.ಸಿ. ರಸ್ತೆ, ಕೆನ್ನಡಲು ಗ್ರಾಮದಲ್ಲಿ ೧೬ ಲಕ್ಷ ರೂ. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣ ಹಾಗೂ ಸಿ.ಸಿ. ರಸ್ತೆ ಹಾಗೂ ಯರೇಹಳ್ಳಿ ಗ್ರಾಮದಲ್ಲಿ ೪೮ ಲಕ್ಷ ರೂ. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣ ಹಾಗೂ ೩೦ ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಈಶ್ವರಪ್ಪ, ತಿಮ್ಮಾರೆಡ್ಡಿ, ಇಂಗಳದಾಳ್ ಪಂಚಾಯಿತಿ ಪಿಡಿಓ ವಿದ್ಯಾಶ್ರೀ, ಸದಸ್ಯ ವೆಂಕಟೇಶ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ನಾಗರಾಜ್ ಸೇರಿದಂತೆ ಗ್ರಾಮಸ್ಥರು ಪಂಚಾಯಿತಿಯ ಮಾಜಿ ಸದಸ್ಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕುರುಮರಡಿಕೆರೆ ಗ್ರಾಮದಲ್ಲಿ ಶಾಲಾ ದಾಖಲಾತಿ ಅಂದೋಲನಕ್ಕೆ ಸಹ ಶಾಸಕ ತಿಪ್ಪಾರೆಡ್ಡಿ ಚಾಲನೆ ನೀಡಿದರು.