ಪ್ರತಿಯೊಬ್ಬ ಪ್ರಜೆಯೂ ಅಭಿವೃದ್ಧಿ ಹೊಂದುವುದೇ ಸರಕಾರದ ಗುರಿ: ಸಚಿವ ಬಿ.ಸಿ.ನಾಗೇಶ್

ಹೊಸದಿಗಂತ ವರದಿ ಮಡಿಕೇರಿ:

ದೇಶದ ಪ್ರತಿಯೊಬ್ಬ ಪ್ರಜೆಯೂ ಅಭಿವೃದ್ಧಿ ಹೊಂದಬೇಕು. ಗೌರವಯುತ ಜೀವನ ನಡೆಸಬೇಕು. ಯಾರೊಬ್ಬರಿಗೂ ತಾರತಮ್ಯ ಮಾಡಬಾರದು ಎನ್ನುವುದು ನಮ್ಮ ಸಂವಿಧಾನದ ಮೂಲ ಆಶಯವಾಗಿದ್ದು, ಅದಕ್ಕನುಗುಣವಾಗಿ ಸರ್ವರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು ನುಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ. 74ನೇ‌ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾವಲಂಬಿ, ಸ್ವಾಭಿಮಾನಿ, ಗೌರವಯುತ ಜೀವನವನ್ನು ನಡೆಸಬೇಕು ಎಂದು ನಮ್ಮ ದೇಶದ ಅನೇಕ ಮಹನೀಯರು ಕಂಡಿದ್ದ ಕನಸನ್ನು ನನಸು ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಹಗಲಿರುಳು ಕಾರ್ಯ ನಿರ್ವಹಿಸುತ್ತಿದೆ.

ಅಮೃತ ಕಾಲ: ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷ ವಾಕ್ಯದಂತೆ ದೇಶದ ಸಮಗ್ರ ಅಭಿವೃದ್ಧಿಗಾಗಿ ಅನೇಕ ಕ್ರಾಂತಿಕಾರಕ ಬದಲಾವಣೆಗಳನ್ನು ಕೇಂದ್ರ ಸರ್ಕಾರ ತಂದಿದೆ. ಮುಂದಿನ 25 ವರ್ಷಗಳು ಭಾರತಕ್ಕೆ ‘ಅಮೃತ ಕಾಲ’. ಈ ನಿಟ್ಟಿನಲ್ಲಿ ರೂಪಿಸಲಾಗಿರುವ ಯೋಜನೆಗಳ ಅನುಷ್ಠಾನಕ್ಕೆ ನಾವೆಲ್ಲರೂ ಕಾರ್ಯ ನಿರ್ವಹಿಸಬೇಕೆಂದು ಪ್ರಧಾನಮಂತ್ರಿಯವರು ಕರೆ ನೀಡಿದ್ದಾರೆ ಎಂದು ಸಚಿವರು‌ ನುಡಿದರು.

ಗತಿ ಶಕ್ತಿಯ ಮೂಲಕ ನವ ಭಾರತ: ಕೈಗಾರಿಕೆ, ಕೃಷಿ, ನೀರಾವರಿ, ಉದ್ಯಮ, ಉದ್ಯೋಗ, ಸಂಪರ್ಕ, ಸಾರಿಗೆ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ವೇಗದ ಬೆಳವಣಿಗೆಗೆ ಒತ್ತು ನೀಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಜೀವನ ಮಟ್ಟವನ್ನು ಮೇಲಕ್ಕೆತ್ತುವ ಗುರಿಯನ್ನು ಹೊಂದಲಾಗಿದೆ. ಅದಕ್ಕಾಗಿ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸಲಿರುವ ಬೃಹತ್ ಮಾಸ್ಟರ್ ಪ್ಲಾನ್ ‘ಗತಿ ಶಕ್ತಿ’ ಮೂಲಕ ನವ ಭಾರತ ನಿರ್ಮಾಣದ ಕಡೆ ದಾಪುಗಾಲು ಇಡಲಾಗುತ್ತಿದೆ.

ಕೃಷಿ ಪ್ರಧಾನ ಭಾರತದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರೈತರ ಆದಾಯ ಹೆಚ್ಚಿಸಿಲು ಅನೇಕ ರೈತಸ್ನೇಹಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಕೃಷಿ ಉತ್ಪಾದನೆ ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ನೀರಾವರಿ, ಅಂತರ್ಜಲ ಹೆಚ್ಚಳ, ಕೆರೆ-ಕುಂಟೆಗಳನ್ನು ತುಂಬಿಸುವ ಮೂಲಕ ಜಲಮೂಲಗಳನ್ನು ವೃದ್ಧಿಸುವುದು, ಬೇವು ಲೇಪಿತ ಯುರಿಯಾ, ‘ಮಣ್ಣು ಆರೋಗ್ಯ ಕಾರ್ಡ್’, ಕೃಷಿ ವಿಕಾಸ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಇ-ನಾಮ್, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಕೃಷಿ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದೆ. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಅಭಿವೃದ್ಧಿಯ ಕಡೆ ದಾಪುಗಾಲಿಡುತ್ತಿದೆ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲೂ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಮೂಲ ಸೌಕರ್ಯ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆಗೆ ಹೂಡಿಕೆ, ಉದ್ಯೋಗ ಸೃಷ್ಟಿ, ಹೊಸ ರೈಲುಗಳ ಸಂಚಾರ, ರಸ್ತೆಗಳ ಅಭಿವೃದ್ಧಿ, ನೀರಾವರಿಯಲ್ಲಿ ಪ್ರಗತಿ ಸಾಧಿಸಲಾಗಿದೆ. ಜಿಎಸ್ಟಿ ಸಂಗ್ರಹದಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯವು ಪ್ರಗತಿಯ ಹಾದಿಯಲ್ಲಿದ್ದು, ಸಮಗ್ರ ಅಭಿವೃದ್ಧಿಗೆ ಅನೇಕ ಜನಪರ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅವರು ನುಡಿದರು.
ಕೊಡಗು ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳನ್ನು ಅಮೃತ ಗ್ರಾಮ ಪಂಚಾಯಿತಿಗಳೆಂದು ಗುರುತಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ವಸತಿ ರಹಿತ ಮತ್ತು ಆಶ್ರಯ ರಹಿತರನ್ನು ಗುರುತಿಸಿ ಎಲ್ಲರಿಗೂ ವಸತಿ ಕಲ್ಪಿಸಲು, ಜಿಲ್ಲೆಯಲ್ಲಿ ಅಮೃತ ಗ್ರಾಮೀಣ ವಸತಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ರೈತರು, ನೇಕಾರರು ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟವನ್ನು ಉತ್ತೇಜಿಸಲು ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸಂಸ್ಥೆಗಳಿಗೆ ತಲಾ ರೂ.30 ಲಕ್ಷದಂತೆ ಮೂರು ವರ್ಷದ ಅವಧಿಯಲ್ಲಿ ಅನುದಾನ ನೀಡಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!