ಹೊಸ ದಿಗಂತ ವರದಿ, ಮೈಸೂರು:
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ ಸೆಮಿಫೈನಲ್ ಆಗಿದ್ದು, ಸ್ವಂತ ಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಡಬ್ಬಲ್ ಇಂಜಿನ್ ಸರ್ಕಾರ ಜನರ ಅಶೋತ್ತರಗಳನ್ನು ಈಡೇರಿಸಲು 150 ಸ್ಥಾನಗಳಲ್ಲಿ ಗೆಲ್ಲಬೇಕು ಎಂದು ಕೇಂದ್ರ ವಿದ್ಯುತ್ ಮತ್ತು ಕೈಗಾರಿಕಾ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ತಿಳಿಸಿದರು.
ಸೋಮವಾರ ರಾತ್ರಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಮೂಲ ಸೌಕರ್ಯ ಮತ್ತು ನಗರಾಭಿವೃದ್ಧಿ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿ,ಧರ್ಮಕ್ಕಿಂತ ದೇಶದ ಅಭಿವೃದ್ಧಿ,ಪರಿವಾರದ ಚಿಂತನೆ ಮಾಡುತ್ತಿರುವ ಪ್ರಧಾನಿ ಮೋದಿ ಕೈಬಲಪಡಿಸಲು ಕರ್ನಾಟಕದಲ್ಲೂ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಮುಂಬರುವ ಚುನಾವಣೆಯು ಸೆಮಿಫೈನಲ್ ಆಗಿರುವುದರಿಂದ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ ರವಿ, ಪ್ರತಿಯೊಂದು ಕ್ಷೇತ್ರದಲ್ಲಿ 20ರಿಂದ 25 ಕಡೆಗಳಲ್ಲಿ ಮಾರ್ಚ್ ತಿಂಗಳ 25 ರವರೆಗೆ ಪತ್ರದ ಮೂಲಕ ಸಂಗ್ರಹ. ಒಂದು ಕೋಟಿ ಜನರನ್ನು ತಲುಪಿ ಅಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ತಯಾರು ಮಾಡಲಾಗುವುದು. ಕೃಷಿ,ಕೈಗಾರಿಕೆ,ಆಹಾರ, ಆರೋಗ್ಯ,ನಗರಾಭಿವೃದ್ಧಿ ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೆ ಸಂಬoಧಿಸಿದoತೆ ಸಂಗ್ರಹ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ವಹಿಸಿದ್ದರು. ನಗರಪಾಲಿಕೆಯ ಶಿವಕುವಾರ್, ಉಪ ಮೇಯರ್ ಡಾ.ಜಿ.ರೂಪಾ, ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್, ಮೈಲ್ಯಾಕ್ ಅಧ್ಯಕ್ಷ ಆರ್.ರಘು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ ಸಂಚಾಲಕ ಮಲ್ಲ ರಾಜೇ ಅರಸ್ ಹಾಜರಿದ್ದರು. ಸಭೆಯಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, ಪೆಟ್ರೋಲ್ ಬ್ಯಾಂಕ್ ಮಾಲೀಕರ ಸಂಘದ ಅಧ್ಯಕ್ಷ ದಿನೇಶ್,ಜಿಎಸ್ ಎಸ್‌ಸಂಸ್ಥೆ ಮುಖ್ಯಸ್ಥ ಶ್ರೀಹರಿ, ಮಾಜಿ ಮಹಾಪೌರ ಎಸ್.ಸತೀಶ್ ಸ್ವಾಮಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಗಿರಿಧರ್, ವಕ್ತಾರ ಎಂ.ಎ.ಮೋಹನ್,ಮಹೇಶ್ ರಾಜೇ ಅರಸ್ ಇನ್ನಿತರರು ಉಪಸ್ಥಿತರಿದ್ದರು.