ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸ ದಿಗಂತ ವರದಿ, ಕಲಬುರಗಿ:
ಕೊರೋನಾ ವಿರುದ್ಧದ ಕಲಬುರಗಿ ಜಿಲ್ಲಾಡಳಿತ ಸಾರಿರುವ ಸಮರಕ್ಕೆ ಧರಂಸಿಂಗ್ ಫೌಂಡೇಷನ್ ಸಂಪೂರ್ಣ ತನ್ನ ಬೆಂಬಲ ಸೂಚಿಸಿದೆ.
ಇದರಂಗವಾಗಿ ಧರಂಸಿಂಗ್ ಫೌಂಡೇಷನ್ನವರು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಮೀಟಿ ಸಹಯೋಗದಲ್ಲಿ ಕೊರೋನಾ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಅನುವಾಗುವಂತೆ ವಿದೇಶದಿಂದ ಆಮದು ಮಾಡಿರುವ 50 ಆಕ್ಸಿಜನ್ ಸಿಲಿಂಡರ್, 10 ಕನ್ವರ್ಟರ್ ಗಳನ್ನು ಶುಕ್ರವಾರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಧರಂಸಿಂಗ್ ಫೌಂಡೇಷನ್ ವತಿಯಿಂದ ಜಿಲ್ಲಾಡಳಿತಕ್ಕೆ ನೀಡಲಾದ ಆಮ್ಲಜನಕ ಸಿಲಿಂಡರ್, ಕನ್ವರ್ಟರಳನ್ನು ಸ್ವೀಕರಿಸಿದರು.
ಜಿಲ್ಲಾಡಳಿತದ ಅಂಗಳದಲ್ಲಿ ನಡೆದ ಹಸ್ತಾಂತರ ಪ್ರಕಿಯೆಯಲ್ಲಿ ಮಾತನಾಡಿದ ಧರಂಸಿಂಗ್ ಫೌಂಡೇಷನ್ ರೂವಾರಿ ಜೇವರ್ಗಿ ಮತಕ್ಷೇತ್ರ ಶಾಸಕರಾದ ಡಾ. ಅಜಯ್ ಸಿಂಗ್ ಯಾರೂ ಕೂಡಾ ತಮ್ಮ ಜೀವಮಾನದಲ್ಲಿ ಕಾಣದಂತಹ ಸಾವಿನ ಸರಣಿ ಕೊರೋನಾದಿಂದಾಗಿ ಕಂಡಿದ್ದಾರೆ ಎಂದರಲ್ಲದೆ, ಸಾವು- ನೋವು, ಸೋಂಕಿನ ಭೀತಿಯಲ್ಲಿದ್ದಾಗ ಆಕ್ಸಿಜನ್, ವೆಂಟಿಲೇಟರ್ ಬರ ಕಾಡಿತ್ತು. ಇದನ್ನೆಲ್ಲ ನಿಭಾಯಿಸಲಾಗದೆ ಅನೇಕರು ಪ್ರಾಣ ಬಿಟ್ಟರು. ಇದನ್ನೆಲ್ಲ ಮನಗಂಡೇ ಧರಂಸಿಂಗ್ ಫೌಂಢೇಷನ್ ಜಿಲ್ಲಾಡಳಿತದ ನೆರವಿಗೆ ನಿಂತಿದೆ. ಮುಂದೆಯೂ ಇಂತಹ ವೈದ್ಯಕೀಯ ಉಪಕರಣಗಳ ಅಗತ್ಯ ಕಂಡು ಬಂದಲ್ಲಿ ಫೌಂಡೇಷನ್ ನೆರವಿಗೆ ಸಿದ್ಧ ಎಂದರು.
ಆಮ್ಲಜನಕದ ಹಾಹಾಕಾರ ಇದ್ದಾಗಲೇ ಮೇ ತಿಂಗಳಲ್ಲಿಯೇ ಧರಂಸಿಂಗ್ ಫೌಂಡೇಷನ್ ವತಿಯಿಂದ ಇಂಡೋನೇಷಿಯಾದ ರಾಜಧಾನಿ ಜಕಾರ್ತಾದ ನಿಸ್ಸಾನ್ ಇಂಡೋನೇಷಿಯಾ ಕಂಪನಿಯಿಂದ ಈ ಆಕ್ಸೀಜನ್ ಸಿಲಿಂಡರ್ಗಳನ್ನು ಖರೀದಿಸಲಾಗಿದೆ. ಅಲ್ಲಿಂದ ಸಿಲಿಂಡರ್ ಕಲಬುರಗಿ ಸೇರಲು ಇಷ್ಟು ದಿನ ಬೇಕಾಯ್ತು, ಟಂಡಮಾರುತದ ಪರಿಮಾಮ ತುಸು ವಇಲಂಬವಾಗಿದೆ. ಆದಾಗ್ಯೂ ಕೊರೋನಾ 3 ನೇ ಅಲೆಯ ಆತಂಕವಿದೆ ಎಂದು ತಜ್ಞರು ಹೇಳುತ್ತಿದ್ದಾರೆ. 2 ನೇ ಅಲೆಯಲ್ಲಾದಂತೆ ಪ್ರಾಣವಾಯು ಹಾಹಾಕಾರ ಕಾಡದಿರಲಿ ಎಂದು ಈಗಲೇ ಮುನ್ನೆಚ್ಚರಿಕೆಯಿಂದ ತಾವು ಕೊರನಾ ವಿರುದ್ಧ ಸಮರ್ಥವಾಗಿ ಹೋರಾಡಲು ಜಿಲ್ಲಾಡಳಿತಕ್ಕೆ ಬಲ ತುಂಬಲು ಆಕ್ಸೀಜನ್, ಯಂತ್ರೋಪಕರಣಗಳನ್ನೆಲ್ಲ ನೀಡುತ್ತಿದ್ದೇವೆ ಎಂದರು.
ವಿದೇಶದಿಂದ ಆಮದಾಗಿ ಕಲಬುರಗಿಗೆ ಬಂದಿರುವ 50 ಆಕ್ಸಿಜನ್ ಸಿಲಿಂಡರ್ಗಳನ್ನು ಬಳಸಿ ಈಗಿನಿಂದಲೇ ಮಕ್ಕಳ ಐಸಿಯು ವಾರ್ಡ್ ಹೆಚ್ಚಿಸುವ ಕೆಲಸ ಜಿಲ್ಲಾಡಳಿತ ಮಾಡಲಿ, ಆಸ್ಪತ್ರೆಯಿಂದ ಆಸ್ಪತ್ರೆಗೆ ರೋಗಿಗಳನ್ನು ಸ್ಥಳಾಂತರಿಸುವಾಗ ಕನ್ವರ್ಟರ್ ಕೆಲಸ ಮಾಡುತ್ತವೆ. ಇವುಗಳನ್ನು ಸರಿಯಾಗಿ ಬಳಕೆ ಮಾಡಲಿ, ಜಿಮ್ಸ್, ಇಎಸ್ಐಸಿಯಲ್ಲಿಯೂ ಹೆಚ್ಚಿನ ಮಕ್ಕಳ ಬೆಡ್ ಸಿದ್ಧಪಡಿಸಲು ಇವುಗಳನ್ನು ಬಳಸುವಂತಾಗಲಿ ಎಂದು ಡಾ. ಅಜಯ್ ಸಿಂಗ್ ಜಿಲ್ಲಾಡಳಿತಕ್ಕೆ ಕೇಳಿಕೊಂಡರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕರಾದ ಎಂವೈ ಪಾಟೀಲ್, ಮಾಜಿ ಶಾಸಕರಾದ ಅಲ್ಲಂಪ್ರಭು ಪಾಟೀಲ್, ತಿಪ್ಪಣ್ಣ ಕಮಕನೂರ್, ಬಿಆರ್ ಪಾಟೀಲ್, ನೆಲೋಗಿ ಗ್ರಾಪಂ ಅಧ್ಯಕ್ಷ ರಾಜಶೇಖರ ಸಿರಿ, ಬೈಲಪ್ಪ ನೆಲೋಗಿ, ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ್, ಎಪಿಎಂಸಿ ಮಾಜಿ ಅಧ್ಯಕ್ಷ ಶರಣು ಭೂಸನೂರ್, ಮಾಜಿ ಮೆಯರ್ ಶರಣು ಮೋದಿ, ಯುವ ಕಾಂಗ್ರೆಸ್ನ ಡಾ. ಕಿರಣ ದೇಶಮುಖ, ಪ್ರವೀಣ ಹರವಾಳ ಸೇರಿದಂತೆ ಅನೇಕರು ಹಾಜರಿದ್ದರು.