ಬಲೂನು ಹಾರಿಸಿ ಅಮೆರಿಕವನ್ನು ಬೆತ್ತಲಾಗಿಸಿಬಿಟ್ಟಿತೇ ಚೀನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೆರಿಕದ ವಾಯು ಪ್ರದೇಶದಲ್ಲಿ ಚೀನಾದ ಬಲೂನೊಂದು ಹಾರಾಟ ನಡೆಸುತ್ತಿರೋ ವಿದ್ಯಮಾನವೀಗ ಜಾಗತಿಕ ವಲಯದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕದ ಮೊಂಟಾನಾ ಪ್ರದೇಶದಲ್ಲಿ ಚೀನಾದ ಬಲೂನು ಹಾರಾಟ ನಡೆಸುತ್ತಿರೋದರ ಬಗ್ಗೆ ಚೀನಾ ಹೇಳಿರೋದೇನೆಂದರೆ ʼಇದೊಂದು ನಾಗರೀಕ ವಾಯುನೌಕೆ, ತನ್ನ ಯೋಜಿತ ಮಾರ್ಗದಿಂದ ವಿಚಲಿತಗೊಂಡು ಅಲ್ಲಿಗೆ ತಲುಪಿದೆʼ ಎಂದು. ಆದರೆ ಅಮೆರಿಕ ಮಾತ್ರ ಇದೊಂದು ಅತ್ಯಾಧುನಿಕ ಬೇಹುಗಾರಿಕಾ ಸಾಧನ ಎಂದಿದೆ. ಈಗಾಗಲೇ ತೈವಾನ್‌ ವಿಷಯವಾಗಿ, ಸೆಮಿಕಂಡಕ್ಟರ್‌ ವಿಷಯವಾಗಿ ಚೀನಾ ಮತ್ತು ಅಮೆರಿಕದ ನಡುವೆ ತಿಕ್ಕಾಟಗಳು ನಡೆಯುತ್ತಿರೋದು ಜಗಜ್ಜಾಹೀರಿನ ಸಂಗತಿ. ಇದೀಗ ಚೀನಾದ ಬಲೂನೊಂದು ಅಮೆರಿಕದ ಮೇಲೆ ಹಾರಾಟ ನಡೆಸುತ್ತಿರೋದು ಈ ಉರಿಗೆ ತುಪ್ಪಸುರಿಯುತ್ತಿದೆ ಎಂದರೆ ಆಶ್ಚರ್ಯವೇನಿಲ್ಲ. ಯಾಕೆಂದರೆ ಬಲೂನು ಹಾರಾಟದ ಹಿನ್ನೆಲೆಯಲ್ಲಿ ಫೆಬ್ರವರಿ 5& 6 ರಂದು ನಡೆಯಬೇಕಿದ್ದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರ ಚೀನಾ ಭೇಟಿಯನ್ನು ಅಮೆರಿಕ ಮುಂದೂಡಿದೆ.

ಇತ್ತೀಚೆಗಷ್ಟೇ ಅಮೆರಿಕದ ವಾಯುಸೇನೆಯ 4 ಸ್ಟಾರ್‌ ಜನರಲ್‌ ಒಬ್ಬರು 2025ರಲ್ಲಿ ಚೀನಾದೊಂದಿಗೆ ಅಮೆರಿಕ ಯುದ್ಧಕ್ಕಿಳಿಯಬಹುದಾದ ಸನ್ನಿವೇಶ ಬರಬಹುದು ಎಂದಿದ್ದರು. ಆದರೆ ಇದೀಗ ಚೀನಾ ಬಲೂನುಹಾರಿಸುವ ಮೂಲಕ ಜಗತ್ತಿನೆದುರು ಶಕ್ತಿಶಾಲಿ ದೇಶವೆಂದು ಹೇಳಿಕೊಂಡು ತಿರುಗುವ ಅಮೆರಿಕವನ್ನು ಬೆತ್ತಲಾಗಿಸುವ ಪ್ರಯತ್ನ ನಡೆಸಿದೆ ಎಂಬ ಅಭಿಪ್ರಾಯಗಳು ತಜ್ಞವಲಯದಿಂದ ಕೇಳಿಬರುತ್ತಿವೆ. ಬಲೂನಿನ ಸಾಮರ್ಥ್ಯ ಏನೇ ಇರಲಿ, ಹೀಗೆ ಬೇರೆ ದೇಶದ ವಸ್ತುವೋ, ಅಥವಾ ವಿಮಾನವೋ ಅಥವಾ ಇನ್ನಾವುದೋ ಅನುಮತಿಯಿಲ್ಲದೇ ತನ್ನ ದೇಶದ ವಾಯುಪ್ರದೇಶ ಮೇಲೆ ಹಾರಾಡುತ್ತಿದೆ ಎಂಬುದು ಗೊತ್ತಾದ ಮೇಲೂ ಅಮೆರಿಕವು ಅದನ್ನು ಹೊಡೆದುರುಳಿಸುವ ಬದಲು ಸುಮ್ಮನೆ ನೋಡುತ್ತಾ ಕೂತಿರುವುದು ಅವರ ಈ ಮಾತಿಗೆ ಇನ್ನಷ್ಟು ಪುಷ್ಟಿ ನೀಡುತ್ತದೆ.

ಅಮೇರಿಕ ಇನ್ನೂ ಯಾಕೆ ಬಲೂನು ಹೊಡೆದುರುಳಿಸಲು ಮೀನಮೇಷ ಎಣಿಸುತ್ತಿದೆ ಎಂಬುದನ್ನು ಪಕ್ಕಕ್ಕಿಡೋಣ, ಅಮೆರಿಕದ ಬಳಿ ಅತ್ಯಾಧುನಿಕ ಮಿಸೈಲ್‌ ರಕ್ಷಣಾ ವ್ಯವಸ್ಥೆಗಳಿವೆ, ವೇಗವಾಗಿ ಹಾರಾಡಬಲ್ಲ ವಿಮಾನಗಳನ್ನು ಪತ್ತೆ ಹಚ್ಚಬಲ್ಲ ರಾಡಾರ್‌ ವ್ಯವಸ್ಥೆಯಿದೆ ಎಂಬುದನ್ನು ಜಗತ್ತು ಇದುವರೆಗೂ ನಂಬಿಕೊಂಡು ಬಂದಿದೆ. ಹಾಗಿದ್ದರೆ ಮಿಸೈಲ್‌ ಅಥವಾ ವಿಮಾನಗಳಿಗಿಂತ ತೀರಾ ಕಡಿಮೆ ವೇಗದಲ್ಲಿ ಹಾರಾಡಬಲ್ಲ ಬಲೂನೊಂದನ್ನು ಗುರುತಿಸಲು ಅದರ ತಂತ್ರಜ್ಞಾನ ಸಾಮರ್ಥ್ಯ ವಿಫಲವಾಯಿತೇ? ಅಥವಾ ಬರುವುದು ಗೊತ್ತಾಗಿಯೂ ಅಮೆರಿಕ ಸುಮ್ಮನೆ ಕೂತಿದ್ಯಾಕೆ? ಎಂಬೆಲ್ಲ ಪ್ರಶ್ನೆಗಳು ಸಹಜವಾಗಿಯೇ ಇಲ್ಲಿ ಜನ್ಮತಾಳುತ್ತವೆ. ಬಲೂನಿಗೆ ಬೇಹುಗಾರಿಕೆ ಸಾಮರ್ಥ್ಯವಿದೆ ಎಂದು ಹೇಳುತ್ತಿರೋ ಅಮರಿಕ ಹೀಗೆ ದಿನಗಟ್ಟಲೇ ಬಲೂನು ಹಾರಾಟ ನಡೆಸುತ್ತಿದ್ದರೂ ಇನ್ನೂ ಯಾಕೆ ಅದನ್ನು ಕೆಡವಲು ಪ್ರಯತ್ನಿಸಿಲ್ಲ ಎಂಬ ಪ್ರಶ್ನಾರ್ಥಕ ಬಹುತೇಕರಿಗೆ ಕಾಡುತ್ತಿದೆ.

ಇನ್ನು ಮೇಲೆ ಹೇಳಿದ ಹಾಗೆ ಚೀನಾ ಅಮೆರಿಕವನ್ನು ಜಗತ್ತಿನೆದುರು ಬೆತ್ತಲಾಗಿಸಲೆಂದೇ ಈ ಪ್ರಯತ್ನ ನಡೆಸಿದೆ ಎಂಬ ಮಾತನ್ನು ಸದ್ಯದ ಮಟ್ಟಿಗಂತೂ ಅಲ್ಲಗಳೆಯಲಾಗದು. ಏಕೆಂದರೆ ಬೇಹುಗಾರಿಕೆಯನ್ನು ಮಾಡಬೇಕೆಂದರೆ ಚೀನಾದ ಬಳಿ ಅತ್ಯಾಧುನಿಕ ಉಪಗ್ರಹ ವ್ಯವಸ್ಥೆಯಿದೆ. ಆದರೆ ಅದನ್ನೆಲ್ಲ ಬಿಟ್ಟು ಚೀನಾ ಈ ರೀತಿ ಬಲೂನು ಹಾರಿಸಿ, ಅದನ್ನು ಅಮೆರಿಕದ ವಾಯುಪ್ರದೇಶದೊಳಗೆ ನುಗ್ಗಿಸಿದೆ. ಹೀಗೆ ನುಗ್ಗಿಸುವ ಮೂಲಕ ಅತ್ಯಂತ ಶಕ್ತಿಶಾಲಿ ರಕ್ಷಣಾ ವ್ಯವಸ್ಥೆ ಹೊದಿದ್ದೇವೆಂದು ಬಡಾಯಿ ಕೊಚ್ಚಿಕೊಳ್ಳುವ ಅಮೆರಿಕದ ಅಸಲಿಯತ್ತನ್ನು ಚೀನಾ ಬಟಾಬಯಲಾಗಿಸಿದೆ ಆಮೂಲಕ ಚೀನಾವು ದೊಡ್ಡ ದೊಡ್ಡ ಬೆದರಿಕೆಗಳನ್ನು ಹಾಕದೆಯೇ ತನ್ನ ಸಾಮರ್ಥ್ಯವನ್ನು ತೋರಿಸುವುದರ ಜತೆಗೆ ಅಮೆರಿಕದ ದೌರ್ಬಲ್ಯವನ್ನೂ ಬಹಿರಂಗಪಡಿಸಿದೆ ಎಂಬೆಲ್ಲ ಅಭಿಪ್ರಾಯಗಳು ಇದೊಂದು ಘಟನೆಯ ಹಿನ್ನೆಲೆಯಲ್ಲಿ ವ್ಯಕ್ತವಾಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!